ಡೈಲಿ ವಾರ್ತೆ:03/DEC/2024
ದಕ್ಷಿಣ ಕನ್ನಡ: ನಾಪತ್ತೆಯಾಗಿದ್ದ ಯುವಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ
ಕಡಬ: ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ದಿ. ಶಾಂತಪ್ಪ ಗೌಡ ಅವರ ಪುತ್ರ ಸಂದೀಪ್ ಗೌಡ (29) ಅವರ ಮೃತದೇಹ ನೆಟ್ಟಣ ರೈಲು ನಿಲ್ದಾಣದಿಂದ ಸುಮಾರು 1.5 ಕಿ.ಮೀ. ದೂರ ನಾರಡ್ಕ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಸೋಮವಾರ ಸಂಜೆ ಪತ್ತೆಯಾಗಿದೆ.
ಆತನನ್ನು ಸ್ನೇಹಿತ, ನೆಟ್ಟಣ ನಿವಾಸಿ ಪ್ರತೀಕ್ ಎಂಬಾತನು ಹಣಕಾಸಿನ ವಿವಾದಕ್ಕೆ ಸಂಬಂಧಿಸಿ ನೆಟ್ಟಣ ರೈಲು ನಿಲ್ದಾಣದ ಬಳಿಯ ಗುಡ್ಡದಲ್ಲಿ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆಗೈದು ಶವವನ್ನು ಕಾಡಿನೊಳಗೆ ಕೊಂಡೊಯ್ದು ಸುಟ್ಟುಹಾಕಲು ಯತ್ನಿಸಿರುವುದು ತನಿಖೆಯಿಂದ ಬಯಲಾಗಿದೆ.
ಸಂದೀಪ್ ಮರ್ದಾಳದಲ್ಲಿ ವಿನಯ ಎಂಬವರೊಂದಿಗೆ ಶಾಮಿಯಾನ ಹಾಕುವ ಕೆಲಸ ಮಾಡುತ್ತಿದ್ದು, ನ. 27 ರಂದು ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೋದವನು ನಾಪತ್ತೆಯಾಗಿದ್ದ. ಆತ ಕೆಲಸ ಮುಗಿಸಿ ಪ್ರತೀಕ್ ಜತೆಗೆ ಕಾರಿನಲ್ಲಿ ಹೋಗಿರುವುದಾಗಿ ತಾಯಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತೀಕ್ ಹಾಗೂ ಇನ್ನೋರ್ವನನ್ನು ಪೊಲೀಸರು ನ. 1ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.
ಸಾರ್ವಜನಿಕರ ಆಕ್ರೋಶ:
ಆರೋಪಿಯನ್ನು ನಮ್ಮ ವಶಕ್ಕೆ ನೀಡಿ ಎಂದು ಸ್ಥಳೀಯರು ಪೊಲೀಸ್ ವಾಹನವನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಕೊಲೆಗೈದು ಮೃತದೇಹವನ್ನು ಕಾಡಿಗೆ ಸಾಗಿಸಲು ಒಬ್ಬನೇ ವ್ಯಕ್ತಿಗೆ ಸಾಧ್ಯವಿಲ್ಲ. ಕೃತ್ಯದಲ್ಲಿ ಇನ್ನೂ ಹಲವು ಮಂದಿ ಭಾಗಿಯಾಗಿರುವ ಸಾಧ್ಯತೆಗಳಿದ್ದು, ಎಲ್ಲರನ್ನೂ ಕೂಡಲೇ ಬಂಧಿಸಬೇಕೆಂದು ಸ್ಥಳೀಯರು ಆಗ್ರಹಿಸಿದರು.