ಡೈಲಿ ವಾರ್ತೆ:04/DEC/2024

ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಮಲ್ಪೆ ಶಾಖೆಯ ಅಕ್ರಮದ ವಿರುದ್ಧ ತನಿಖೆಗೆ ರಾಜ್ಯ ಸರಕಾರ ಆದೇಶ- ಹೋರಾಟಕ್ಕೆ ಸಂದ ಮೊದಲ ಗೆಲುವು – ನಾಗೇಂದ್ರ ಪುತ್ರನ್

ಉಡುಪಿ: ಮಹಾಲಕ್ಷ್ಮೀ ಕೊ-ಅಪರೇಟಿವ್ ಬ್ಯಾಂಕ್ ಮಲ್ಪೆ ಶಾಖೆಯಲ್ಲಿನ ಅಕ್ರಮ ವಿರುದ್ಧ ತನಿಖೆಗೆ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು ಬ್ಯಾಂಕ್‌ನಿಂದ ಗ್ರಾಹಕರಿಗೆ ಆಗಿರುವ ಅನ್ಯಾಯದ ವಿರುದ್ಧ ಸುಮಾರು 2 ತಿಂಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಸಂದ ಮೊದಲ ಗೆಲುವು ಎಂದು ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಸಮಿತಿಯ ಉಡುಪಿ ಜಿಲ್ಲಾ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.

ಸಾವಿರಾರು ಜನರನ್ನು ಸಾಲದ ಕೂಪಕ್ಕೆ ತಳ್ಳಿ ತನ್ನನ್ನು ಏನು ಮಾಡಲು ಸಾಧ್ಯ ಇಲ್ಲ ಎಂದು ಅಹಂಕಾರದಿಂದ ಬೀಗುತ್ತಿರುವವರಿಗೆ ಇದು ಒಂದು ರೀತಿ ದೇವರೇ ಕೊಟ್ಟ ಶಾಪ. 48 ದಿನ ಗಡುವು ಕೊಟ್ಟ ಕರಂಬಳ್ಳಿ ವೆಂಕಟರಮಣ 15 ದಿನ ಮೊದಲೇ ತನ್ನ ಪ್ರತಾಪ ತೋರಿಸಿರುವುದು ಭಗವಂತನ ಮೇಲೆ ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ.
ಮಾಜಿ ಶಾಸಕ ರಘುಪತಿ ಭಟ್ ಹಾಗೂ ಪ್ರಸಾದ್ ಕಾಂಚನ್ ಅವರ ಬಗ್ಗೆ ಸುಖಾಸುಮ್ಮನೆ ಅವಹೇಳನ ಮಾಡಿ ಅವರನ್ನು ತೇಜೋವದೆ ಮಾಡಲು ಸಾಧ್ಯ ಇಲ್ಲ. ಫೆಡರೇಶನ್ ಅವ್ಯವಹಾರ ದಾಖಲೆಯಿದ್ದು ಮುಂದಿನ ಹೋರಾಟ ತೀವ್ರಗೊಳಿಸಲಾಗುವುದು ಎಂದು ಕೋಟ ನಾಗೇಂದ್ರ ಪುತ್ರನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.