ಡೈಲಿ ವಾರ್ತೆ:06/DEC/2024

ಕಲಬುರಗಿ: ಆನ್ಲೈನ್ ವಿಡಿಯೋ ಗೇಮ್ ನ ದಾಸನಾಗಿ ನರ್ಸಿಂಗ್ ವಿದ್ಯಾರ್ಥಿ ನೇಣಿಗೆ ಶರಣು

ಕಲಬುರಗಿ: ನರ್ಸಿಂಗ್ ಓದುತ್ತಿರುವ ವಿದ್ಯಾರ್ಥಿ ಆನ್ಲೈನ್ ವಿಡಿಯೋ ಗೇಮ್ ನ ದಾಸನಾಗಿ ಕೊನೆಗೆ ಅದರಿಂದ ಹೊರ ಬಾರಲಾರದೇ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಡಿ. 5 ರಂದು ಗುರುವಾರ ನಗರದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಡೋಣಗಾಪುರದ ಸೋಮನಾಥ ಚಿದ್ರೆ(22) ಎಂದು ಗುರುತಿಸಲಾಗಿದೆ.

ಈತ ನಗರದ ಜೀಮ್ಸ್ ಆಸ್ಪತ್ರೆಯ ನರ್ಸಿಂಗ್ ಕೋಸ್೯ನ ಅಂತೀಮ ವರ್ಷದಲ್ಲಿ ಓದುತ್ತಿದ್ದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

ನಗರದ ಎಸ್ಪಿ ಕಚೇರಿಗೆ ಹತ್ತಿಕೊಂಡಂತಿರುವ ವೀರಶೈವ ವಸತಿ ನಿಲಯದ ಆವರಣದ ಮರಕ್ಕೆ ನೇಣು ಹಾಕಿಕೊಂಡು ಸೋಮನಾಥ ಆತ್ಮಹತ್ಯೆ ಮಾಡಿಕೊಂಡಿದ್ದು, ಮಗನ ಸಾವಿಗೆ ಆನ್ಲೈನ್ ವಿಡಿಯೋ ಗೇಮ್ ಕಾರಣ ಎಂಬುದಾಗಿ ಸೋಮನಾಥನ ತಂದೆ ಸತೀಶ ಕುಮಾರ ದೂರು ಸಲ್ಲಿಸಿದ್ದಾರೆ.‌ ಹೊಲದ ಮೇಲೆ ಸಾಲ ಮಾಡಿ ಹಾಗೂ ಮನೆಯಲ್ಲಿರುವ ಬಂಗಾರ ಅಡವು ಇಟ್ಟು ಮಗನಿಗೆ ಹಣ ತಂದು ಕೊಡಲಾಗಿದೆ. ಒಟ್ಟು 37 ಲಕ್ಷ ರೂ ಸಾಲ ಮಾಡಿ ಮಗನಿಗೆ ತಂದು ಕೊಡಲಾಗಿದೆ. ಕೊನೆಗೂ ಆನ್ಲೈನ್ ವಿಡಿಯೋ ಚಟದಿಂದ ಹೊರ ಬಾರದೇ ಮಗ ನಮ್ಮನ್ನು ಬಿಟ್ಟು ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌