ಡೈಲಿ ವಾರ್ತೆ:06/DEC/2024
ಮಧುವನ ಶಾಲೆ: ಅಮೃತ ಮಹೋತ್ಸವ ಆಮಂತ್ರಣ ಬಿಡುಗಡೆ
ಕೋಟ: ವಿವೇಕಾನಂದ ಹಿ.ಪ್ರಾ. ಶಾಲೆ ಮಧುವನ – ಅಚ್ಲಾಡಿಯ ಅಮೃತ ಮಹೋತ್ಸವ ಹಾಗೂ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮಧುರಾಮೃತ ಕಾರ್ಯಕ್ರಮ ಡಿಸೆಂಬರ್ – 28 ಮತ್ತು 29ರಂದು ಜರಗಲಿದ್ದು ಈ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಡಿ.6 ರಂದು ಶಾಲೆ ಆವರಣದಲ್ಲಿ ಜರಗಿತು.
ಸಂಸ್ಥೆಯ ನಿವೃತ್ತ ಮುಖ್ಯ ಶಿಕ್ಷಕ, ಶಾಲೆಯ ಅಭಿವೃದ್ಧಿಯಲ್ಲಿ ಸಾಕಷ್ಟು ಕೊಡುಗೆ ನೀಡಿದ ಎ. ಸುರೇಂದ್ರ ಶೆಟ್ಟಿ ಆಮಂತ್ರಣ ಬಿಡುಗಡೆಗೊಳಿಸಿ, ಮಧುವನ ಶಾಲೆ ನಮ್ಮೆಲ್ಲರಿಗೂ ಅತ್ಯಂತ ಪ್ರೀತಿ ಪಾತ್ರವಾದ ಸಂಸ್ಥೆಯಾಗಿದ್ದು ಇಲ್ಲಿನ ಅಮೃತ ಮಹೋತ್ಸವ ಕಾರ್ಯಕ್ರಮ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಮೂಡಿಬರಲಿ ಎಂದರು.
ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶೀನಪ್ಪ ಶೆಟ್ಟಿಯವರ ಪುತ್ರ, ವಿಜಯ ಬ್ಯಾಂಕ್ ನ ನಿವೃತ್ತ ಪ್ರಬಂಧಕ ಜಗನ್ನಾಥ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿ ಶುಭ ಹಾರೈಸಿದರು.
ಮುಖ್ಯ ಶಿಕ್ಷಕ ಲಚ್ಚು ನಾಯಕ್ ಅವರು ಕಾರ್ಯಕ್ರಮದ ರೂಪುರೇಷೆ ಬಗ್ಗೆ ತಿಳಿಸಿದರು.
ವಿವೇಕ ಯಕ್ಷರಂಗ ಅಧ್ಯಕ್ಷ ರವಿ ಶೆಟ್ಟಿ, ಶೈಕ್ಷಣಿಕ ಸಮಿತಿಯ ಸುರೇಂದ್ರ ಶೆಟ್ಟಿ ಕೊಮೆ, ಶಾಲಾ ಅಮೃತ ಮಹೋತ್ಸವ ಸಮಿತಿ ಸದಸ್ಯರು, ಶಿಕ್ಷಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.