


ಡೈಲಿ ವಾರ್ತೆ:07/DEC/2024



ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸಿದ ನಗರಸಭೆ ಸದಸ್ಯ!
ಕೊಪ್ಪಳ: ತಮ್ಮ ವಾರ್ಡಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಕೊಪ್ಪಳ ನಗರಸಭೆ 16ನೇ ವಾರ್ಡಿನ ಬಿಜೆಪಿ ಸದಸ್ಯ ಸೋಮಣ್ಣ ಹಳ್ಳಿ ಅವರು ತಲೆಯ ಮೇಲೆ ಮೂರು ನಾಮ ಹಾಕಿದ ಕಲ್ಲನ್ನು ಹೊತ್ತು ವಿಶಿಷ್ಟವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ ನಗರಸಭೆ ಮುಂಭಾಗದ ಆವರಣದಲ್ಲಿ ನಡೆದಿದೆ.
ತಮ್ಮ 16ನೇ ವಾರ್ಡಿನಲ್ಲಿ ಹಲವು ಸಮಸ್ಯೆಗಳು ಇರುವ ಕುರಿತು ನಗರಸಭೆ ಪೌರಾಯುಕ್ಯರು ಹಾಗೂ ನಗರಸಭೆ ಅಧ್ಯಕ್ಷರಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ತಮ್ಮ ವಾರ್ಡಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ, ಶೌಚಾಲಯ ನಿರ್ಮಾಣ ಹಾಗೂ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ನಗರಸಭೆ ಸರಿಯಾಗಿ ಸ್ಪಂದನೆ ಮಾಡದೆ ನಿರ್ಲಕ್ಷ ವಹಿಸಿರುವ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ತಲೆಯ ಮೇಲೆ ಮೂರು ನಾಮದ ಕಲ್ಲನ್ನು ಹೊತ್ತು ಪ್ರತಿಭಟನೆ ನಡೆಸಿ ನಗರಸಭೆಯ ಅಧ್ಯಕ್ಷರ ಹಾಗೂ ಸದಸ್ಯರ ಮತ್ತು ಅಧಿಕಾರಿಗಳ ಗಮನ ಸೆಳೆದರು.
ಶನಿವಾರ ನಗರಸಭೆ ಸಾಮಾನ್ಯ ಸಭೆ ನಡೆಯುವ ಹಿನ್ನೆಲೆಯಲ್ಲಿ ಅವರು ಈ ರೀತಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.
ಘಟನಾ ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಸೇರಿದಂತೆ ಇತರೆ ಸದಸ್ಯರು ಸ್ಥಳಕ್ಕೆ ಆಗಮಿಸಿ ಸದಸ್ಯ ಸೋಮಣ್ಣ ಹಳ್ಳಿಯವರ ಮನವೊಲಿಸುವ ಪ್ರಯತ್ನ ಮಾಡಿದರು. ಅವರ ಮನವೊಲಿಕೆಗೆ ಸೋಮಣ್ಣ ಹಳ್ಳಿಯವರು ಯಾವುದೇ ಸೊಪ್ಪು ಹಾಕಿದೆ ಸ್ಥಳಕ್ಕೆ ಡಿಸಿ ಆಗಮಿಸಿ ನನ್ನ ಮನವಿ ಸ್ವೀಕರಿಸಬೇಕು ಎಂದು ಬಿಗಿ ಪಟ್ಟು ಹಿಡಿದರು.
ಇಲ್ಲವೇ ನಗರಸಭೆ ಅಧ್ಯಕ್ಷರು ಸೇರಿದಂತೆ ಎಲ್ಲ ವಾರ್ಡಿನ ಸದಸ್ಯರು ನನ್ನ ವಾರ್ಡಿನಲ್ಲಿನ ಸಮಸ್ಯೆಗಳನ್ನು ಆಲಿಸಲು ಸ್ಥಳಕ್ಕಾಗಿಸಬೇಕೆಂದು ಬಿಗಿಪಟ್ಟು ಹಿಡಿದರು. ಇದರಿಂದ ನಗರಸಭೆ ಅಧ್ಯಕ್ಷ ಪಟೇಲ್ ಅವರು ಅಲ್ಲಿಂದ ನಿರ್ಗಮಿಸಿದರು. ಸೋಮಣ್ಣ ಹಳ್ಳಿ ತಮ್ಮ ಪ್ರತಿಭಟನೆ ಮುಂದುವರಿಸಿದರು. ತಲೆ ಮೇಲೆ ಕಲ್ಲು ಹೊತ್ತಿದ್ದನ್ನು ಗಮನಿಸಿದ ಪೊಲೀಸರು ತಕ್ಷಣ ಅವರ ತಲೆಯ ಮೇಲಿನ ಕಲ್ಲನ್ನು ತೆಗೆದು ನಗರಸಭೆ ಪಕ್ಕದ ಸ್ಥಳದಲ್ಲಿ ಇರಿಸಿದ್ದರು. ಇದನ್ನು ವಿರೋಧಿಸಿದ ಸದಸ್ಯ ಸೋಮಣ್ಣ ಅವರು ಕಲ್ಲನ್ನು ಬಿಟ್ಟು ಸಹಜವಾಗಿ ನಗರಸಭೆ ಮುಂದೆ ಆಕ್ರೋಶ ಹೊರ ಹಾಕಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ನನ್ನ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲವೆಂದು ಹೇಳಿ ನಮ್ಮ ಧರಣಿಯನ್ನು ಮುಂದುವರಿಸಿದರು. ಮತ್ತೆ ಧರಣಿ ತಳಕ್ಕೆ ಆಗಮಿಸಿದ ಅಧ್ಯಕ್ಷ ಪಟೇಲ್ ಅವರು ಸದಸ್ಯ ಸೋಮಣ್ಣ ಅವರ ಮನವೊಲಿಸಿ ಸಾಮಾನ್ಯ ಸಭೆಗೆ ಕರೆದೊಯ್ದು ಅವರ ಸಮಸ್ಯೆ ಆಲಿಸಿ ಪರಿಹರಿಸುವ ಭರವಸೆ ನೀಡಿದರು.