ಡೈಲಿ ವಾರ್ತೆ:07/DEC/2024

ಬೆಳ್ತಂಗಡಿ: ಅಮಾಯಕ ಮುಸ್ಲಿಂ ಯುವಕನ ಮೇಲೆ NIA ಮತ್ತು ಪೊಲೀಸ್ ದೌರ್ಜನ್ಯ ಆರೋಪ: ಎಎಸ್‌ಪಿ ನೇತೃತ್ವದಲ್ಲಿ ತನಿಖೆ?

ಮಂಗಳೂರು: NIA ಅಧಿಕಾರಿಗಳು ಮತ್ತು ಬೆಳ್ತಂಗಡಿ ಪೊಲೀಸರು ಅಮಾಯಕ ಮುಸ್ಲಿಂ ಯುವಕನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಕೇಳಿ ಬಂದಿರುವ ಆರೋಪದ ಬಗ್ಗೆ ಉನ್ನತ ಮಟ್ಟದ ಇಲಾಖಾ ತನಿಖೆ ನಡೆಸಲು ದಕ್ಷಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ನೇತೃತ್ವದಲ್ಲಿ ಇಲಾಖಾ ತನಿಖೆ ನಡೆಸಿ ಕ್ರಮಕೈಗೊಳ್ಳುವುದಾಗಿ ದ.ಕ ಪೊಲೀಸ್‌ ವರಿಷ್ಠಾಧಿಕಾರಿಗಳು ಸ್ಪೀಕರ್ ಯು.ಟಿ ಖಾದ‌ರ್ ಅವರಿಗೆ ಮಾಹಿತಿ ನೀಡಿರುವುದು ತಿಳಿದುಬಂದಿದೆ.

ಸಂತ್ರಸ್ತ ಯುವಕ ಸುಹೈಲ್ ಗಂಭೀರವಾಗಿ ಗಾಯಗೊಂಡು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. NIA ಮತ್ತು ಬೆಳ್ತಂಗಡಿ ಪೊಲೀಸರು ತನ್ನ ಮೇಲೆ ದೌರ್ಜನ್ಯ ನಡೆಸಿರುವುದಾಗಿ ಅವರು ಆರೋಪಿಸಿದ್ದಾರೆ. ಈ ಬಗ್ಗೆ ಎಸ್‌ಪಿ ಅವರಿಂದ ಮಾಹಿತಿ ಪಡೆದಿರುವ ಸ್ಪೀಕ‌ರ್ ಯು.ಟಿ ಖಾದರ್, ಪ್ರಕರಣದ ಬಗ್ಗೆ ಕೂಲಂಕುಷ ತನಿಖೆ ನಡೆಸಿ ನ್ಯಾಯ ಒದಗಿಸಲು ಕ್ರಮಕೈಗೊಳ್ಳುವಂತೆ ಎಸ್‌ಪಿಯವರಿಗೆ ಸೂಚನೆ ನೀಡಿದ್ದಾರೆ. ಪ್ರಕರಣದ ಬಗ್ಗೆ ಎಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ದ.ಕ ಎಸ್‌ಪಿ ಯತೀಶ್ ಅವರು ಸ್ಪೀಕರ್ ಯು.ಟಿ ಖಾದರ್ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಎಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಸಲು ಇಂದೇ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಸಂತ್ರಸ್ತ ಯುವಕನ ಊರವರು ಮತ್ತು ಜಮಾಅತ್‌ನ ಮುಖಂಡರು ಇಂದು ಸಂಜೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಲಿದ್ದಾರೆ.
ದ.ಕ ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶಾಹುಲ್ ಹಮೀದ್ ಕೆ.ಕೆ ನೇತೃತ್ವದಲ್ಲಿ ಈ ನಿಯೋಗ ಎಸ್‌ಪಿ ಅವರನ್ನು ಭೇಟಿಯಾಗಲಿದ್ದು, ಈ ವೇಳೆ ಪ್ರಕರಣದ ತನಿಖೆ ಬಗ್ಗೆ ಎಸ್‌ಪಿಯವರು ಸ್ಪಷ್ಟ ಮಾಹಿತಿ ನೀಡುವ ಸಾಧ್ಯತೆ ಇದೆ.

ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿ ಮೊನ್ನೆ ಡಿ.5ರಂದು ಎನ್‌ಐಎ ಮತ್ತು ಬೆಳ್ತಂಗಡಿ ಪೊಲೀಸರು ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದಲ್ಲಿ ಆರೋಪಿಗಾಗಿ ಶೋಧ ನಡೆಸಿದ್ದರು. ಈ ವೇಳೆ ಆರೋಪಿಯ ದೂರದ ಸಂಬಂಧಿಯಾಗಿರುವ ಸಬರಬೈಲು ನಿವಾಸಿ ಸುಹೈಲ್ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಸಂತ್ರಸ್ತ ಯುವಕ ಸುಹೈಲ್ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.