ಡೈಲಿ ವಾರ್ತೆ:25/DEC/2024

ಪತ್ನಿಯೊಂದಿಗೆ ಅನೈತಿಕ ಸಂಬಂಧ ಆರೋಪ: ವ್ಯಕ್ತಿಯ ಮೇಲೆ ಕುಡುಗೋಲು ಬೀಸಿ ಕೊಲೆಗೆ ಯತ್ನ, ಆರೋಪಿ ಪೊಲೀಸ್ ವಶ

ಬೆಳಗಾವಿ: ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯ ಮೇಲೆ ಹಾಡುಹಗಲೇ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ನಡೆದಿದೆ.

ಮುತ್ತು ಗಣಾಚಾರಿ ಎಂಬಾತ 8 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ. ಆದರೆ, ಮುತ್ತು ಗಣಾಚಾರಿಯ ಪತ್ನಿಯನ್ನು ಮಕ್ತುಮ್ ತಟಗಾ‌ರ್ ಎಂಬಾತ ಈ ಹಿಂದೆ ಪ್ರೀತಿಸುತ್ತಿದ್ದನಂತೆ. ಮದುವೆ ಬಳಿಕವೂ ಗಣಾಚಾರಿ ಪತ್ನಿಯ ಜೊತೆ ಮತ್ತುಮ್ ಸಂಪರ್ಕದಲ್ಲಿ ಇದ್ದ ವಿಷಯ ತಿಳಿದು ಆತ ತನ್ನ ಪತ್ನಿಯ ಜೊತೆ ಜಗಳವಾಡಿದ್ದಾನೆ. ಈ ಕಾರಣಕ್ಕಾಗಿ ಮುತ್ತು ಗಣಾಚಾರಿಯ ಪತ್ನಿ ಆತನನ್ನು ಬಿಟ್ಟು ತವರು ಮನೆ ಸೇರಿದ್ದಾಳೆ.

ಈ ವಿಚಾರವಾಗಿ ಮಕ್ಕುಮ್ ತಟಗಾರ್, ಮುತ್ತು ಗಣಾಚಾರಿಯನ್ನು ರೇಗಿಸುತ್ತಿದ್ದನಂತೆ. ಇದರಿಂದ ಮುತ್ತು ಗಣಾಚಾರಿ ಆಕ್ರೋಶಗೊಂಡು, ಸಂತೆಗೆ ಬಂದಿದ್ದ ಮುಕ್ತುಮ್ ತಟಗಾ‌ರ್ ಮೇಲೆ ಕುಡುಗೋಲು ಬೀಸಿದ್ದಾನೆ. ಕೆಳಗೆ ಬೀಳುತ್ತಿದ್ದಂತೆ ಬರೋಬ್ಬರಿ 24 ಬಾರಿ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದಾನೆ.

ಕೃತ್ಯ ಎಸಗಿ ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿ ಮುತ್ತು ಗಣಾಚಾರಿಯನ್ನು ಸೋಮವಾರ ಪೇಟೆಯಲ್ಲಿ ಕಿತ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೊಡ್ಡವಾಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮಕ್ತುಮ್ ತಟಗಾರ್‌ನನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸ್ಥಿತಿ ಗಂಭೀರವಾಗಿದೆ.