ಡೈಲಿ ವಾರ್ತೆ:25/DEC/2024

ಪೂಂಚ್‌ನಲ್ಲಿ 300 ಅಡಿ ಕಂದಕಕ್ಕೆ ಉರುಳಿದ ಸೇನಾ ವಾಹನ: ಕುಂದಾಪುರ ಮೂಲದ ಯೋಧ ಸೇರಿ ಕರ್ನಾಟಕದ ಮೂವರು ಸೈನಿಕರು ಹುತಾತ್ಮ

ಕುಂದಾಪುರ: ಜಮ್ಮು ಕಾಶ್ಮೀರ ಪೂಂಚ್‌ನಲ್ಲಿ ನಡೆದ ದುರಂತದಲ್ಲಿ ಕರ್ನಾಟದ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ.

ಮಂಗಳವಾರ ಸಂಜೆ 5:30ಕ್ಕೆ 300 ಅಡಿ ಕಂದಕಕ್ಕೆ ಸೇನಾ ವಾಹನ ಬಿದ್ದು ಮರಾಠಾ ರೆಜಿಮೆಂಟ್‌ನ ಐವರು ಮೃತಪಟ್ಟಿದ್ದರು. ಐವರು ಪೈಕಿ ಮೂವರು ಕರ್ನಾಟಕದವರಾಗಿದ್ದಾರೆ.

ಈ ಪೈಕಿ ಓರ್ವ ಯೋಧ ಕುಂದಾಪುರ ಬೀಜಾಡಿಯ ಅನೂಪ್ ಪೂಜಾರಿ(31), ಬೆಳಗಾವಿ ಪಂತ ಬಾಳೇಕುಂದ್ರಿ ದಯಾನಂದ ತಿರಕನ್ನವರ್, ಮುಧೋಳದ ಮಹಾಲಿಂಗಪುರದ ಮಹೇಶ್ ಮರಿಗೊಂಡ ಎಂದು ಗುರುತಿಸಲಾಗಿದೆ.
ಸೈನಿಕರು ಮೃತಪಟ್ಟ ಬಗ್ಗೆ ಭಾರತೀಯ ಸೇನೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ.

ಕುಂದಾಪುರ ಬೀಜಾಡಿಯ ಅನೂಪ್ ಪೂಜಾರಿ ಇವರು ಬೀಜಾಡಿ ನಿವಾಸಿ ಚಂದು ಪೂಜಾರಿ, ನಾರಾಯಣ ಪೂಜಾರಿ ದಂಪತಿಗಳ ಪುತ್ರ ಎಂದು ತಿಳಿದು ಬಂದಿದೆ.

ಅನೂಪ್ ಪೂಜಾರಿ ಸೇನೆಗೆ ಸೇರಿ 13 ವರ್ಷವಾಗಿತ್ತು. ಅವರು ಮರಾಠ ಲೈಟ್ ಇನ್ಫೆಂಟ್ರಿ ಬಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹುತಾತ್ಮರಾಧ ಯೋಧ ಅನೂಪ್ ಅವರಿಗೆ ವಿವಾಹವಾಗಿದ್ದು 2 ವರ್ಷದ ಹೆಣ್ಣು ಮಗುವಿದೆ.
ಕಳೆದ ತಿಂಗಳು ರಜೆಗೆ ಆಗಮಿಸಿದ್ದ ಅವರು ಡಿ.15 ರಂದು ಕೋಟೇಶ್ವರದಲ್ಲಿ ನಡೆದ ಕೊಡಿ ಹಬ್ಬದಲ್ಲಿ ಪಾಲ್ಗೊಂಡಿದ್ದಲ್ಲದೆ, ಮಗಳ ಹುಟ್ಟುಹಬ್ಬವನ್ನು ಆಚರಿಸಿದ್ದರು.
ಹುತ್ಮಾತ ಯೋಧ ತಾಯಿ, ಇಬ್ಬರು ಸಹೋದರಿಯರು, ಪತ್ನಿ, ಪುತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ
ಮೃತ ಕುಟುಂಬದವರ ಆಕ್ರದನ ಮುಗಿಲು ಮುಟ್ಟಿದೆ.

ಡಿ. 26 ರಂದು ಗುರುವಾರ ತೆಕ್ಕಟ್ಟೆಯಿಂದ ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿ ಕೋಟೇಶ್ವರ ಮೂಲಕವಾಗಿ ಮೆರವಣಿಗೆ ನಡೆಸಿ ಹುಟ್ಟೂರಾದ ಬೀಜಾಡಿಗೆ ಕರೆತಂದು ಸಕಲ ವಿಧಿಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ.
ಬೀಜಾಡಿ ಪಡುಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ತೆ ಕಲ್ಪಿಸಲಾಗುತ್ತದೆ. ಸಮಾಜ ಸೇವಕ ಅಶೋಕ್ ಪೂಜಾರಿ ಬೀಜಾಡಿ, ಬೀಜಾಡಿ ಗ್ರಾ.ಪಂ ಅಧ್ಯಕ್ಷ ಪ್ರಕಾಶ್ ಪೂಜಾರಿ, ಗ್ರಾಮಸ್ತರ ನೇತೃತ್ವದಲ್ಲಿ ಅಂತಿಮ ಸಂಸ್ಕಾರಕ್ಕೆ ಸಿದ್ದತೆ ಮಾಡಲಾಗುತ್ತಿದೆ.

ಮಹೇಶ್ ನಾಗಪ್ಪ ಮಾರಿಗೊಂಡ (25) ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ನಿವಾಸಿಯಾಗಿದ್ದರು. 7 ವರ್ಷಗಳಿಂದ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹೇಶ್ ಅವರಿಗೆ ಮೂರು ವರ್ಷದ ಹಿಂದೆ ಮದುವೆಯಾಗಿತ್ತು. ನಾಳೆ ಬೆಳಗಾವಿ ಮೂಲಕ ಮಹಾಲಿಂಗಪುರಕ್ಕೆ ಪಾರ್ಥಿವ ಶರೀರ ಬರಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಸೇನಾ ಟ್ರಕ್ ರಸ್ತೆಯಿಂದ ಸ್ಕಿಡ್ ಆಗಿ ಕಂದಕಕ್ಕೆ ಬಿದ್ದಿತ್ತು. ಘರೋವಾ ಪ್ರದೇಶದಲ್ಲಿ ಸಂಜೆ 5:20 ರ ಸುಮಾರಿಗೆ ಆರು ವಾಹನಗಳ ಬೆಂಗಾವಲು ಪಡೆಯ ಭಾಗವಾಗಿದ್ದ ಸೇನಾ ವಾಹನವು ಜಿಲ್ಲೆಯ ಬನೋಯ್‌ಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತ್ತು.