ಡೈಲಿ ವಾರ್ತೆ:25/DEC/2024
ಮಂಗಳೂರು: ನಕಲಿ ಚಿನ್ನದ ಬಳೆ ಅಡವಿಟ್ಟ ವ್ಯಕ್ತಿ – 2 ಕೋಟಿ ರೂ. ಸಾಲ ಪಡೆದು ವಂಚನೆ!
ಮಂಗಳೂರು: ವ್ಯಕ್ತಿಯೋರ್ವ ನಕಲಿ ಚಿನ್ನ ಅಡವಿಟ್ಟು 2 ಕೋಟಿಗೂ ಅಧಿಕ ರೂ. ಸಾಲ ಪಡೆದು ಮಂಗಳೂರಿನ ಸಮಾಜ ಸೇವಾ ಸಹಕಾರಿ ಸಂಘಕ್ಕೆ ವಂಚಿಸಿರುವ ಆರೋಪ ಕೇಳಿಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಲ ಗ್ರಾಮದ ಅಬೂಬಕ್ಕರ್ ಸಿದ್ದಿಕ್ ವಂಚಿಸಿದ ಆರೋಪಿ.
500 ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ಅಬೂಬಕ್ಕರ್ ಸಿದ್ದಿಕ್ 2,11,89,800 ರೂ. ಸಾಲ ಪಡೆದು, ಮೋಸ ಮಾಡಿದ್ದಾನೆ. ಹೀಗಾಗಿ, ಅಬೂಬಕ್ಕರ್ ಸಿದ್ದಿಕ್, ಬ್ಯಾಂಕ್ ಆಡಳಿತ ಮಂಡಳಿ ಮತ್ತು ನೌಕರರ ವಿರುದ್ಧ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮಾಜ ಸೇವಾ ಸಹಕಾರಿ ಸಂಘ ಜಿಲ್ಲೆಯಲ್ಲಿ 16 ಶಾಖೆ ಹೊಂದಿದೆ. ಮಂಗಳೂರಿನ ಪಡೀಲ್ನ ಶಾಖೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರವಾಗಿದೆ ಎಂಬ ಆರೋಪ ಕೇಳಿಬಂದಿದೆ. ಚಿನ್ನ ಪರೀಕ್ಷೆ ನಡೆಸುವ ಸರಪ, ಬ್ಯಾಂಕ್ನ ಅಧ್ಯಕ್ಷ, ನಿರ್ದೇಶಕರು ಮ್ಯಾನೇಜರ್, ಸಿಬ್ಬಂದಿ ಸಹಕಾರದಿಂದ ಅವ್ಯವಹಾರ ನಡೆದಿದೆ ಎಂಬ ಆರೋಪವಿದೆ. ಈ ಬಗ್ಗೆ ಬ್ಯಾಂಕ್ನ ಸದಸ್ಯರು, ಮಾಜಿ ನಿರ್ದೇಶಕ ಡಿ.ಲೋಕನಾಥ್ ದೂರಿನ ಮೇರೆಗೆ 28 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಬ್ಯಾಂಕ್ನ ಸರಪ ವಿವೇಕ್ ಆಚಾರ್ಯನನ್ನು ಬಂಧಿಸಲಾಗಿದೆ.
ತಲೆಮರೆಸಿಕೊಂಡಿರುವ ಆರೋಪಿ ಅಬೂಬಕ್ಕರ್ ಸಿದ್ದಿಕ್ಗಾಗಿ ಹುಡುಕಾಟ ಮುಂದುವರೆದಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.