ಡೈಲಿ ವಾರ್ತೆ:27/DEC/2024

ಅಂಬಲಪಾಡಿ ಮೇಲ್ಸೇತುವೆ ನಿರ್ಮಾಣದ ಪಿಲ್ಲರ್ ಗುಂಡಿಗೆ ಬಿದ್ದ ಕಾರು – ಪ್ರಯಾಣಿಕರು ಪಾರು

ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಾ.ಹೆ.ಯ ಮೇಲ್ಸೇತುವೆ ಅಡಿಪಾಯಕ್ಕಾಗಿ ಅಗೆದಿರುವ ಬೃಹತ್ ಪಿಲ್ಲರ್ ಗುಂಡಿಗೆ ಮಗುಚಿಬಿದ್ದ ಘಟನೆ ಅಂಬಲಪಾಡಿ ಜಂಕ್ಷನ್ ರಾ.ಹೆ.66ರಲ್ಲಿ ಇಂದು ಮುಂಜಾನೆ 3 ಗಂಟೆಗೆ ಸಂಭವಿಸಿದೆ.

ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಕೇರಳ ನೋಂದಣಿ ಸಂಖ್ಯೆ ಹೊಂದಿರುವ ಕಾರಿನಲ್ಲಿ ಐದು ಮಂದಿ ಪ್ರಯಾಣಿಕರು ಕೊಲ್ಲೂರಿಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಜಂಕ್ಷನ್ ನಲ್ಲಿ ಮೇಲ್ಸೇತುವೆಯ ಫಿಲ್ಲರ್ ನಿರ್ಮಿಸಲು ಬಹೃತ್ ಗುಂಡಿ ಅಗೆಯಲಾಗಿದ್ದು, ಚಾಲಕನ ನಿಯಂತ್ರಣ ತಪ್ಪಿದ ಕಾರು ಈ ಹೊಂಡಕ್ಕೆ ಮಗುಚಿ ಬಿದ್ದಿದೆ.

ಅಂಬಲಪಾಡಿ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಮೇಲ್ಸೇತುವೆ ನಿರ್ಮಾಣವಾಗುತ್ತಿರುವ ಸ್ಥಳದ ಸುತ್ತಲೂ ಸಾಕಷ್ಟು ಬ್ಯಾರಿಕೇಡ್‌ಗಳು ಮತ್ತು ಎಚ್ಚರಿಕೆ ಫಲಕಗಳಿಲ್ಲದಿರುವುದು ಈ ಅಪಘಾತಕ್ಕೆ ಕಾರಣವಾಗಿದೆ. ಸ್ಥಳದಲ್ಲಿ ಸುರಕ್ಷತಾ ಕ್ರಮಗಳು ಇಲ್ಲದಿರುವ ಕಾರಣ ಜನರು ಕಳವಳ ವ್ಯಕ್ತಪಡಿಸಿದ್ದಾರೆ.