ಡೈಲಿ ವಾರ್ತೆ:29/DEC/2024
ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ – ಲ್ಯಾಂಡಿಂಗ್ ವೇಳೆ ರನ್ ವೇ ಗೋಡೆಗೆ ವಿಮಾನ ಡಿಕ್ಕಿ, 62 ಪ್ರಯಾಣಿಕರ ದುರ್ಮರಣ
ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ಭೀಕರ ವಿಮಾನ ದುರಂತ ಸಂಭವಿಸಿದೆ. ಸಿಬ್ಬಂದಿ ಸೇರಿದಂತೆ 181 ಪ್ರಯಾಣಿಕರಿದ್ದ ವಿಮಾನ ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿ ರನ್ ವೇ ತಡೆ ಗೋಡೆಗೆ ಡಿಕ್ಕಿಯಾಗಿರುವ ಘಟನೆ ಡಿ. 29 ರಂದು ಭಾನುವಾರ ಬೆಳಿಗ್ಗೆ ಮುಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ.
ಈ ದುರಂತದಲ್ಲಿ ಕನಿಷ್ಠ 62 ಮಂದಿ ಪ್ರಯಾಣಿಕರು ದುರ್ಮರಣ ಹೊಂದಿದ್ದಾರೆ ಎಂದು ವರದಿಯಾಗಿದೆ.
ಪತನವಾಗಿರುವ ವಿಮಾನವನ್ನು ಜೆಜು ಏರ್ ಸಂಸ್ಥೆಗೆ ಸೇರಿದ ಬೋಯಿಂಗ್ 737-800 ಎಂದು ಗುರುತಿಸಲಾಗಿದೆ. ಬ್ಯಾಂಕಾಕ್‌ನಿಂದ ಬಂದ ವಿಮಾನ ಮುಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ರನ್ ವೇಯಿಂದ ಪಕ್ಕಕ್ಕೆ ಜಾರಿ ತಡೆಗೋಡೆಗೆ ಡಿಕ್ಕಿಯಾಗಿದೆ. ವಿಮಾನದಲ್ಲಿ 6 ಸಿಬ್ಬಂದಿ ಹಾಗೂ 175 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.
ಕೂಡಲೇ ಘಟನಾ ಸ್ಥಳಕ್ಕೆ ಬಂದ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದು, ಇಬ್ಬರನ್ನು ರಕ್ಷಿಸಿದ್ದಾರೆ. ರನ್ ವೇ ತಡೆ ಗೋಡೆಗೆ ಡಿಕ್ಕಿಯಾಗುತ್ತಿದ್ದಂತೆ ವಿಮಾನ ತಕ್ಷಣವೇ ಬೆಂಕಿಯಿಂದ ಹೊತ್ತಿ ಉರಿದಿದೆ. ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.