ಡೈಲಿ ವಾರ್ತೆ: 03/JAN/2025
ಗಂಗೊಳ್ಳಿ ಪಂಚಾಯತ್ನಲ್ಲಿ ಮುಸ್ಲಿಂ ಮೌಲ್ವಿಯ ಪ್ರಾರ್ಥನೆಗೆ ಆಕ್ಷೇಪ, ಶಾಸಕರ ನೇತೃತ್ವದಲ್ಲಿ ಹಿಂದೂ ಸಂಘಟನೆಗಳ ಪ್ರತಿಭಟನೆ
ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿಯೊಬ್ಬರು ಪ್ರಾರ್ಥನೆ ನಡೆಸಿದ ವಿಡಿಯೋವನ್ನು ಹಿಂದೂ ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಅಕ್ರೋಶ ವ್ಯಕ್ತಪಡಿಸಿವೆ. ಈ ಸಂಬಂಧ ಇಂದು ಬೈಂದೂರು ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಯಿತು.
ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಹಿಂದೂ ಸಂಘಟನೆ ಕಾರ್ಯಕರ್ತರು ಕಾಂಗ್ರೆಸ್ ಮತ್ತು ಎಸ್ ಡಿಪಿಐ ನಡೆಯನ್ನು ಖಂಡಿಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಶಾಸಕ ಗುರುರಾಜ್ ಗಂಟಿಹೊಳೆ, ಕಾಂಗ್ರೆಸ್ ನವರು ಅಧಿಕಾರಕ್ಕಾಗಿ ಕಾನೂನು ಬಾಹಿರ ಕೃತ್ಯ ನಡೆಸುತ್ತಿದ್ದಾರೆ. ಈ ಮೊದಲು ಎಸ್ ಡಿಪಿಐ ಯನ್ನು ವಿರೋಧಿಸುತ್ತಿದ್ದ ಕಾಂಗ್ರೆಸ್ ಈಗ ಆ ಪಕ್ಷದೊಂದಿಗೆ ಕೈಜೋಡಿಸಿ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದ ತಕ್ಷಣ ಒಟ್ಟು ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ದೂರಿದರು.
ಈ ಸಂದರ್ಭ ಮನವಿಯನ್ನು ಕುಂದಾಪುರ ತಹಶೀಲ್ದಾರ್ ಮಲ್ಲಿಕಾರ್ಜುನ್ ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ರವಿ ಕುಮಾರ್ ಹುಕ್ಕೇರಿ ಅವರಿಗೆ ಸಲ್ಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.
ಗಂಗೊಳ್ಳಿ ಗ್ರಾಪಂ ಪಿಡಿಒ ಉಮಾಶಂಕರ, ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸವಿತ್ರತೇಜ, ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಹರೀಶ್ ಆರ್. ಉಪಸ್ಥಿತರಿದ್ದರು.
ಇಲ್ಲಿ ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ – ಎಸ್ ಡಿಪಿಐ ಅಧಿಕಾರ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಪಂಚಾಯತ್ ಉಪಾಧ್ಯಕ್ಷರು ಅಧಿಕಾರ ಸ್ವೀಕರಿಸುವ ವೇಳೆ ಮುಸ್ಲಿಂ ಮೌಲ್ವಿಯಿಂದ ಪ್ರಾರ್ಥನೆ ನಡೆಸಿದ್ದರು. ಇದು ವಿವಾದವಾಗುತ್ತಿದ್ದಂತೆ ಇಂದು ಕಾಂಗ್ರೆಸ್ ಸದಸ್ಯೆ ಜಯಂತಿ ಖಾರ್ವಿ ನೇತೃತ್ವದಲ್ಲಿ ಗಣಹೋಮ ನಡೆದಿತ್ತು.