ಡೈಲಿ ವಾರ್ತೆ: ಫೆ./02/2026

53.5 ಲಕ್ಷ ಕೋಟಿ ರೂ. ದಾಖಲೆ ಬಜೆಟ್: ‘ವಿಕಸಿತ ಭಾರತ್–2047’ ಗುರಿಗೆ ಸ್ಪಷ್ಟ ದಿಕ್ಕು – ಸಿ.ಎ ಡಾ. ವಿಷ್ಣು ಭರತ್ ಆಲಂಪಲ್ಲಿ

ಬೆಂಗಳೂರು, ಫೆ.02: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಂಬತ್ತನೇ ಬಾರಿಗೆ ಮಂಡಿಸಿದ ಕೇಂದ್ರ ಬಜೆಟ್ ದೇಶದ ಇತಿಹಾಸದಲ್ಲೇ 53.5 ಲಕ್ಷ ಕೋಟಿ ರೂ.ಗಳ ಅತಿ ಹೆಚ್ಚು ಮೊತ್ತದ ಬಜೆಟ್ ಆಗಿದ್ದು, ‘ವಿಕಸಿತ ಭಾರತ್–2047’ ಗುರಿಯನ್ನು ಸಾಧಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದು ಸಿ.ಎ ಡಾ. ವಿಷ್ಣು ಭರತ್ ಆಲಂಪಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಶಿಕ್ಷಣ, ವಸತಿ, ಆರೋಗ್ಯ, ಕ್ರೀಡೆ, ಸಾಂಸ್ಕೃತಿಕ, ಆಧ್ಯಾತ್ಮಿಕ, ಪರಂಪರೆ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಿಗೆ ವಿಶೇಷ ಗಮನ ನೀಡಲಾಗಿದೆ ಎಂದರು. ಉದ್ಯೋಗ ಸೃಷ್ಟಿ, ಮಹಿಳಾ ಸಬಲೀಕರಣ, ದುರ್ಬಲ ವರ್ಗಗಳ ಉನ್ನತಿ ಹಾಗೂ ಜನರ ಜೀವನ ಸುಲಭಗೊಳಿಸುವ ನಿಟ್ಟಿನಲ್ಲಿ ಈ ಬಜೆಟ್ ರೂಪುಗೊಂಡಿದೆ ಎಂದು ತಿಳಿಸಿದರು.

ರಾಜ್ಯ–ಕೇಂದ್ರ ಸಂಬಂಧವನ್ನು ಬಲಪಡಿಸುವ ಪ್ರಯತ್ನದ ಜೊತೆಗೆ ಚುನಾವಣೆ ನಡೆಯಲಿರುವ ಐದು ರಾಜ್ಯಗಳಿಗೆ ವಿಶೇಷ ಗಮನ ನೀಡಲಾಗಿದೆ ಎಂಬುದು ಸ್ಪಷ್ಟವಾಗಿದ್ದರೂ, ಈಶಾನ್ಯ ಭಾರತದ ದುರ್ಬಲ ರಾಜ್ಯಗಳಿಗೆ ನೀಡಿರುವ ಪ್ರಾಮುಖ್ಯತೆ ಗಮನಾರ್ಹವಾಗಿದೆ ಎಂದು ಹೇಳಿದರು.

ಆರ್ಥಿಕ ವೃದ್ಧಿ ದರವನ್ನು 7.2% ಎಂದು ಕಾಯ್ದುಕೊಳ್ಳಲಾಗಿದ್ದು, ಇದು ಚೀನಾ (4.6%) ಮತ್ತು ಅಮೆರಿಕ (4.3%)ಗಿಂತ ಹೆಚ್ಚಿನದು. ಹಣದುಬ್ಬರವನ್ನು ಜಿಡಿಪಿಯ 4.55%ಕ್ಕಿಂತ ಕಡಿಮೆ ಮಟ್ಟದಲ್ಲಿ ನಿಯಂತ್ರಿಸುವ ಗುರಿ ಘೋಷಿಸಿರುವುದು ಸಕಾರಾತ್ಮಕ ಅಂಶ ಎಂದು ವಿಶ್ಲೇಷಿಸಿದರು.

ತೆರಿಗೆ ಸಂಬಂಧಿತವಾಗಿ ಆದಾಯ ತೆರಿಗೆ ಸ್ಲಾಬ್ ಅಥವಾ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ, ಟಿಡಿಎಸ್/ಟಿಸಿಎಸ್ ದರಗಳಲ್ಲಿ ಮಾಡಿದ ತಿದ್ದುಪಡಿ ತೆರಿಗೆದಾರರಿಗೆ ಅನುಕೂಲಕರವಾಗಿದೆ ಎಂದರು.
ತೆರಿಗೆ ಅನುಸರಣೆಯನ್ನು ಸರಳಗೊಳಿಸಿ ನಾಗರಿಕ ಸ್ನೇಹಿ ವ್ಯವಸ್ಥೆ ರೂಪಿಸುವತ್ತ ಸರ್ಕಾರದ ಗಮನ ಇದೆ ಎಂದು ಹೇಳಿದರು.

ಮೂಲಸೌಕರ್ಯ ಅಭಿವೃದ್ಧಿಗೆ ಒಟ್ಟು ಬಜೆಟ್ ಹಂಚಿಕೆಯ 20%ಕ್ಕಿಂತ ಹೆಚ್ಚು ಮೊತ್ತ ಮೀಸಲಿಡಲಾಗಿದೆ. ಬೆಂಗಳೂರು–ಚೆನ್ನೈ, ಬೆಂಗಳೂರು–ಹೈದರಾಬಾದ್ ಸೇರಿದಂತೆ ಆರು ಪ್ರಮುಖ ನಗರಗಳಿಗೆ ಹೈ-ಸ್ಪೀಡ್ ರೈಲು ಯೋಜನೆಗಳು ಘೋಷಿಸಲ್ಪಟ್ಟಿದ್ದು, ಎರಡನೇ ಮತ್ತು ಮೂರನೇ ಹಂತದ ನಗರಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.

ಹೊಸ ಆದಾಯ ತೆರಿಗೆ ಕಾಯಿದೆ 2026ರ ಏಪ್ರಿಲ್ 1ರಿಂದ ಜಾರಿಗೆ ಬರಲಿದ್ದು, ನಿಯಮಗಳು ಹಾಗೂ ಐಟಿಆರ್ ಫಾರ್ಮ್‌ಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹಣಕಾಸು ಸಚಿವೆ ಘೋಷಿಸಿದ್ದಾರೆ ಎಂದು ಹೇಳಿದರು.

ಪ್ರತಿ ರಾಜ್ಯದಲ್ಲಿ ಕ್ಲಸ್ಟರ್ ಆಧಾರಿತ ಪ್ಲಗ್–ಅಂಡ್–ಪ್ಲೇ ಮಾದರಿಯಲ್ಲಿ ಮೂರು ಸಮರ್ಪಿತ ರಾಸಾಯನಿಕ ಉದ್ಯಾನವನಗಳು, ನಾಲ್ಕು ರಾಜ್ಯಗಳಿಗೆ ಅಪರೂಪದ ಭೂಮಿ ಕಾರಿಡಾರ್‌ಗಳು (ಕೇರಳ, ತಮಿಳುನಾಡು, ಒಡಿಶಾ, ಆಂಧ್ರ ಪ್ರದೇಶ) ಘೋಷಿಸಿರುವುದನ್ನು ಅವರು ಸ್ವಾಗತಿಸಿದರು.

ಷೇರು ಮಾರುಕಟ್ಟೆಯಲ್ಲಿ ಬೈಬ್ಯಾಕ್ ಆದಾಯವನ್ನು ಬಂಡವಾಳ ಲಾಭವಾಗಿ ಪರಿಗಣಿಸಿರುವುದರಿಂದ ಆರಂಭದಲ್ಲಿ ಸೂಚ್ಯಂಕ ಕುಸಿತ ಕಂಡರೂ, ಬಳಿಕ ಮಾರುಕಟ್ಟೆ ಚೇತರಿಸಿಕೊಂಡಿತು ಎಂದು ಹೇಳಿದರು.

ವಿದೇಶದಲ್ಲಿರುವಂತೆ ಗಂಡ–ಹೆಂಡತಿ ಘಟಕಕ್ಕೆ ತೆರಿಗೆ ವಿಧಿಸುವುದು ಅಥವಾ ಚಿನ್ನ–ಬೆಳ್ಳಿ ಮೇಲಿನ ಜಿಎಸ್ಟಿ ಪರಿಹಾರ ಕುರಿತು ಹರಡಿದ್ದ ವದಂತಿಗಳಿಗೆ ಬಜೆಟ್‌ನಲ್ಲಿ ಯಾವುದೇ ಸ್ಥಾನ ಇಲ್ಲ ಎಂದು ಸ್ಪಷ್ಟಪಡಿಸಿದರು.