
ಡೈಲಿ ವಾರ್ತೆ: ಫೆ./02/2026
ಮಹಿಳೆಯರ ಆರೋಗ್ಯಕ್ಕೆ ಒತ್ತು: ಫೆ.4ರಂದು ಉಚಿತ ಸರ್ವೈಕಲ್ ಕ್ಯಾನ್ಸರ್ ತಪಾಸಣಾ ಶಿಬಿರ

ಬೆಂಗಳೂರು, ಫೆ. 02 :ವಿಶ್ವ ಕ್ಯಾನ್ಸರ್ ದಿನದ ಹಿನ್ನೆಲೆಯಲ್ಲಿ ಅಖಿಲ ಭಾರತ ಥೇರಾ ಪಂಥ ಮಹಿಳಾ ಮಂಡಳದ ಆಶ್ರಯದಲ್ಲಿ ಬೆಂಗಳೂರಿನ ಗಾಂಧಿನಗರ ಶಾಖೆಯ ವತಿಯಿಂದ ಉಚಿತ ಸರ್ವೈಕಲ್ ಕ್ಯಾನ್ಸರ್ ತಪಾಸಣೆ ಹಾಗೂ ಚಿಕಿತ್ಸಾ ಅಭಿಯಾನವನ್ನು ಫೆ.4ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಂಡಳದ ಪ್ರತಿನಿಧಿ ಲಕ್ಷ್ಮೀ ಬೋಹ್ರಾ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ಅನುಕೂಲವಾಗುವ ಈ ಶಿಬಿರವನ್ನು ಮತ್ತಷ್ಟು ಜನರಿಗೆ ತಲುಪಿಸುವ ಉದ್ದೇಶದಿಂದ ಅಭಿಯಾನ ಆಯೋಜಿಸಲಾಗಿದ್ದು, 21ರಿಂದ 65 ವರ್ಷ ವಯೋಮಿತಿಯ ಮಹಿಳೆಯರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಶಿಬಿರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದು, ಚಿತ್ರನಟಿ ಸಂಜನಾ ಗುರ್ಲಾನಿ ಕಾರ್ಯಕ್ರಮದ ರಾಯಭಾರಿಯಾಗಿದ್ದಾರೆ.
ಬೆಂಗಳೂರಿನ ಒಟ್ಟು 20 ಆಸ್ಪತ್ರೆಗಳಲ್ಲಿ ಉಚಿತ ತಪಾಸಣೆ, ನೋಂದಣಿ ಹಾಗೂ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರು ನಗರದಲ್ಲಿ ಉದ್ಯೋಗಸ್ಥ ಮಹಿಳೆಯರಲ್ಲಿ ಸರ್ವೈಕಲ್ ಕ್ಯಾನ್ಸರ್ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸರಳ, ಸುರಕ್ಷಿತ ಹಾಗೂ ನೋವು ರಹಿತ ತಪಾಸಣೆ ಸ್ಥಳದಲ್ಲಿಯೇ ನಡೆಯಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸರ್ವೈಕಲ್ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿ ಕೇಂದ್ರ ಸರ್ಕಾರವೂ ಲಸಿಕಾ ಅಭಿಯಾನ ಆರಂಭಿಸಿರುವುದನ್ನು ಉಲ್ಲೇಖಿಸಿದ ಅವರು, ರೋಗ ತಡೆಗಟ್ಟುವ ಜೊತೆಗೆ ಸಮಸ್ಯೆ ಪತ್ತೆಯಾದವರಿಗೆ ಸೂಕ್ತ ಚಿಕಿತ್ಸೆ ಒದಗಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಡಳದ ಕಾರ್ಯದರ್ಶಿ ವಿಜೇತ ಜೈನ್, ಸಂಚಾಲಕರು ಇಂದು ಕಿನ್ವೇಸರ, ನೀತಾ ಗೋಡಿಯಾ ಸೇರಿದಂತೆ ಇತರರು ಉಪಸ್ಥಿತರಿದ್ದರು.