ಡೈಲಿ ವಾರ್ತೆ: ಫೆ./02/2026

ಪರಿಶಿಷ್ಟ ಸಮುದಾಯದ ನಾಯಕರ ವಿರುದ್ಧ ಅವಹೇಳನೆ: ‘ಗುಲಾಮರ ಅಪ್ಪ’ ಫೇಸ್‌ಬುಕ್ ಖಾತೆದಾರ ಬೆಂಗಳೂರು ಮೂಲದ ವ್ಯಕ್ತಿ ಬಂಧನ

ಕಲಬುರಗಿ: ಪರಿಶಿಷ್ಟ ಸಮುದಾಯದ ಪ್ರಮುಖ ನಾಯಕರ ವಿರುದ್ಧ ಅವಮಾನಕಾರಿ ಹಾಗೂ ಅವಹೇಳನಕಾರಿ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದ ವ್ಯಕ್ತಿಯನ್ನು ಕಲಬುರಗಿ ನಗರದ ಸಬರ್ಬನ್ ಪೊಲೀಸ್ ಠಾಣೆಯ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಬಂಧಿತನನ್ನು ಬೆಂಗಳೂರು ವಿದ್ಯಾಮಾನ್ಯ ನಗರದ ನಿವಾಸಿ ಆನಂದ್ ಅಂಜನಪ್ಪ (41) ಎಂದು ಗುರುತಿಸಲಾಗಿದೆ.

ಆರೋಪಿಯು ಬೆಂಗಳೂರು ರೇಸ್‌ಕೋರ್ಸ್ ರಸ್ತೆಯಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಹಿರಿಯ ಐಟಿ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡುತ್ತಿದ್ದನೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಆನಂದ್ ಅಂಜನಪ್ಪ ‘ಗುಲಾಮರ ಅಪ್ಪ’ ಎಂಬ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ತೆರೆಯಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಪರಿಶಿಷ್ಟ ಸಮುದಾಯದ ನಾಯಕರ ಕುರಿತು ಅವಹೇಳನಕಾರಿ ಮತ್ತು ಅವಮಾನಕಾರಿ ಬರಹಗಳನ್ನು ನಿರಂತರವಾಗಿ ಪ್ರಕಟಿಸುತ್ತಿದ್ದ ಎನ್ನಲಾಗಿದೆ.

ಈ ಸಂಬಂಧ ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ಅವರು ಸಬರ್ಬನ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಆರೋಪಿಯ ವಿರುದ್ಧ ಸಂಬಂಧಿತ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.