ಡೈಲಿ ವಾರ್ತೆ: 03/JAN/2025
ಗಂಗೊಳ್ಳಿ ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಸೋಲು, ಹತಾಶೆಯಿಂದ ಅಪಪ್ರಚಾರ – ಎಸ್ಡಿಪಿಐ
ಗಂಗೊಳ್ಳಿ: ಕೈಲಾಗದ ಶತ್ರುವಿನ ಕೊನೆಯ ಅಸ್ತ್ರ ಅಪಪ್ರಚಾರ ಎಂಬ ಮಾತಿನಂತೆ ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋಲನ್ನು ಕಂಡು ಅಧಿಕಾರವನ್ನು ಕಳೆದುಕೊಂಡಿರುವ ಬಿಜೆಪಿ ಹತಾಶೆಯಿಂದ ಗಂಗೊಳ್ಳಿ ಗ್ರಾಮ ಪಂಚಾಯತಿಯಲ್ಲಿ ನಮಾಜ್ ಮಾಡಲಾಗಿದೆ ಎಂಬ ಅಪಪ್ರಚಾರದಲ್ಲಿ ತೊಡಗಿದೆ ಎಂದು ಗಂಗೊಳ್ಳಿ ಗ್ರಾ.ಪಂ ಉಪಾಧ್ಯಕ್ಷ ತಬ್ರೇಜ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಾಮಾನ್ಯವಾಗಿ ಚುನಾವಣೆಗಳಲ್ಲಿ ಗೆದ್ದಂತಹ ಜನಪ್ರತಿನಿಧಿಗಳು ತಮ್ಮ ಕಚೇರಿಗಳನ್ನು ಉದ್ಘಾಟನೆ ಮಾಡುವ ಸಂದರ್ಭದಲ್ಲಿ ತಮ್ಮ ತಮ್ಮ ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾಗಿ ಪೂಜೆ ಪುರಸ್ಕಾರಗಳನ್ನು ನಡೆಸುತ್ತಾರೆ. ಈ ಬಾರಿ ಗಂಗೊಳ್ಳಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಜಯಂತಿ ಖಾರ್ವಿ ಗಣಹೋಮ ಮಾಡುವ ಮೂಲಕ ತಮ್ಮ ಕಚೇರಿ ಉದ್ಘಾಟಿಸಿದರೆ, ಉಪಾಧ್ಯಕ್ಷರಾಗಿ ಆಯ್ಕೆಯಾದ ತಬ್ರೇಜ್ ರವರು ದುವಾ ನೆರವೇರಿಸುವ ಮೂಲಕ ಉದ್ಘಾಟಿಸಿದ್ದರು. ಇದ್ದನ್ನೇ ಮಹಾ ಅಪರಾಧವೆಂಬಂತೆ ಬಿಂಬಿಸುವ ಮೂಲಕ ಬಿಜೆಪಿ ಗಂಗೊಳ್ಳಿಯ ಸೌಹಾರ್ದತೆಯನ್ನು ಕೆಡಿಸಲು ಪ್ರಯತಿಸುತ್ತಿದೆ.
ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆಯವರು ಈ ಅಪಪ್ರಚಾರಕ್ಕೆ ನೇತೃತ್ವ ನೀಡಿದ್ದು ದುರಂತವೇ ಸರಿ ಎಂದರು. ಕಳೆದ 20 ವರ್ಷಗಳಿಂದ ಗಂಗೊಳ್ಳಿ ಗ್ರಾಮ ಪಂಚಾಯತಿಯಲ್ಲಿ ಅಧಿಕಾರ ನಡೆಸಿದ್ದ ಬಿಜೆಪಿ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಕೇವಲ ಕೋಮು ಹಾಗೂ ದ್ವೇಷ ರಾಜಕಾರಣ ಮಾಡಿದ ಪರಿಣಾಮ ಈ ಬಾರಿ ಗಂಗೊಳ್ಳಿ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಯನ್ನು ಜನರು ಸೋಲಿಸಿ ಮನೆಗೆ ಕಳುಹಿಸಿದ್ದರು. ಆದರೂ ತನ್ನ ತಪ್ಪುಗಳಿಂದ ಪಾಠ ಕಲಿಯದ ಬಿಜೆಪಿ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿ ಈ ಅಪಪ್ರಚಾರದಲ್ಲಿ ತೊಡಗಿದೆ ಇದು ಹೇಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಜನತೆ ಬೈಂದೂರ್ ಕ್ಷೇತ್ರದಿಂದಲೇ ಬಿಜೆಪಿಯನ್ನು ಮೂಲೆಗುಂಪು ಮಾಡಲಿದ್ದಾರೆ ಎಂದು ಹೇಳಿದ್ದಾರೆ.