ಡೈಲಿ ವಾರ್ತೆ: 06/JAN/2025
ಎಚ್ಎಂಪಿವಿ ವೈರಸ್| ಬೆಂಗಳೂರಿನಲ್ಲಿ ಇಬ್ಬರು ಮಕ್ಕಳಲ್ಲಿ ಎಚ್ಎಂಪಿವಿ ವೈರಸ್ ಪತ್ತೆ
ಬೆಂಗಳೂರು: ಬೆಂಗಳೂರಿನಲ್ಲಿ 8 ತಿಂಗಳ ಹಾಗೂ 3 ತಿಂಗಳ ಮಗುವಿನಲ್ಲಿ ಎಚ್ಎಂಪಿವಿ (HMPV) ವೈರಸ್ ದೃಢಪಟ್ಟಿದೆ. ಮೊದಲನೆಯ ಪ್ರಕರಣದಲ್ಲಿ 8 ತಿಂಗಳ ಮಗುವಿಗೆ ಜ್ವರ ಬಂದ ಕಾರಣ ಕೆಲವು ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ರಕ್ತ ಪರೀಕ್ಷೆ ಮಾಡಿಸಿದಾಗ HMPV ವೈರಸ್ ಇರುವುದು ಪತ್ತೆಯಾಗಿದೆ. ಆದರೆ, ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಮೂರು ತಿಂಗಳ ಹೆಣ್ಣು ಶಿಶುವಿನಲ್ಲಿಯೂ ವೈರಸ್ ದೃಢಪಟ್ಟಿದೆ. ಆದರೆ, ಶಿಶುವನ್ನು ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರೋಗ್ಯ ಇಲಾಖೆ ಹೇಳಿದ್ದೇನು?
ಎಚ್ಎಂಪಿವಿ ವೈರಸ್ ಭಾರತದಲ್ಲೂ ಇದೆ. ಆದರೆ, ಅದು ಮ್ಯೂಟೆಷನ್ ಆಗಿದೆಯಾ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ. ನಮಗೆ ಚೀನಾದಲ್ಲಿ ಮ್ಯುಟೇಟ್ ಆಗಿರುವ ವೈರಸ್ ಹೇಗಿದೆ ಎಂದು ತಿಳಿದಿಲ್ಲ. ಹೀಗಾಗಿ ಇಲ್ಲಿ ಪತ್ತೆಯಾಗಿರುವುದು ಸಾಮಾನ್ಯ HMPV ವೈರಸ್ಸೇ ಅಥವಾ ಚೀನಾದ ತಳಿಯಾ ಎಂಬ ಗೊಂದಲ ಇದೆ. ಭಾರತದಲ್ಲೂ ಸಾಮಾನ್ಯ HMPV ವೈರಸ್ ಶೇ 0.78 ರಷ್ಟು ಕಾಣಿಸುತ್ತದೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ತಿಳಿಸಿದ್ದಾರೆ.
ಸದ್ಯ ಸೋಂಕು ಪತ್ತೆಯಾಗಿರುವ ಮಗುವಿಗೆ ಮತ್ತು ಕುಟುಂಬದವರಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಈ ಹಿನ್ನೆಲೆಯ ಬಗ್ಗೆ ಆರೋಗ್ಯ ಇಲಾಖೆ ಕೂಡಾ ಪರಿಶೀಲನೆ ನಡೆಸುತ್ತಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹರ್ಷಗುಪ್ತ ತಿಳಿಸಿದ್ದಾರೆ.
ಕೇಂದ್ರಕ್ಕೆ ಮಾಹಿತಿ
ಮಗುವಿನಲ್ಲಿ ವೈರಸ್ ಪತ್ತೆಯಾದ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದೂ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸೂಕ್ತ ಮುನ್ನೆಚ್ಚರಿಕೆ ವಹಿಸಿ ಎಂದು ಕೇಂದ್ರ ಆರೋಗ್ಯ ಇಲಾಖೆ ರಾಜ್ಯಕ್ಕೆ ಸೂಚಿಸಿದೆ.