ಡೈಲಿ ವಾರ್ತೆ: 07/JAN/2025
ನೇಪಾಳದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪನ: 53 ಸಾವು, 38ಕ್ಕೂ ಹೆಚ್ಚು ಜನರಿಗೆ ಗಾಯ – ದೆಹಲಿ, ಬಿಹಾರದಲ್ಲೂ ನಡುಗಿದ ಭೂಮಿ
ಕಠ್ಮಂಡ: ಭಾರತದ ನೆರೆ ದೇಶ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಭೂಕಂಪದಲ್ಲಿ ಭಾರೀ ಸಾವು ನೋವು ವರದಿಯಾಗಿದೆ.
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.1 ದಾಖಲಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ ಬೆಳಿಗ್ಗೆ 6.35ಕ್ಕೆ ಮೊದಲ ಬಾರಿಗೆ ಭೂಮಿ ಕಂಪಿಸಿದೆ. ಕಂಪನದ ತೀವ್ರತೆಗೆ ಮನೆ, ಕಟ್ಟಡಗಳು ಧರಶಾಯಿಯಾಗಿವೆ.
ಇತ್ತೀಚಿನ ವರದಿಗಳಂತೆ 53 ಮಂದಿ ಸಾವನ್ನಪ್ಪಿದ್ದು, 38 ಮಂದಿ ಗಾಯಗೊಂಡಿದ್ದಾರೆ.
ಹಿಮಾಲಯ ಪ್ರದೇಶ ವ್ಯಾಪ್ತಿಯ ಮೌಂಟ್ ಎವರೆಸ್ಟ್ ಪರ್ವತಕ್ಕೆ ಸಮೀಪದಲ್ಲಿರುವ ಭೂಪ್ರದೇಶದಲ್ಲಿ ಕಂಪನದ ಅನುಭವವಾಗಿದೆ.
ನೇಪಾಳದ ಲಾಬ್ಚೆ ಎಂಬಲ್ಲಿಂದ ಸುಮಾರು 93 ಕಿಲೋ ಮೀಟರ್ ದೂರದ ಚೀನಾದ ಟಿಬೆಟ್‌ನಲ್ಲಿ ವ್ಯಾಪಿಸಿರುವ ಪರ್ವತ ಗಡಿ ಪ್ರದೇಶಗಳಲ್ಲಿ ಭೂಕಂಪನದ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ ಎಂದು ಯುಎಸ್ ಜಿಯಾಲಾಜಿಕಲ್ ಸರ್ವೇ ಮಾಹಿತಿ ನೀಡಿದೆ. ಇಲ್ಲಿಂದ ಸುಮಾರು 200 ಕಿಲೋ ಮೀಟರ್ ದೂರದ ದೇಶದ ಆಗ್ನೇಯ ದಿಕ್ಕಿನಲ್ಲಿರುವ ಕಠ್ಮಂಡುವಿನಲ್ಲಿ ಕಟ್ಟಡಗಳು ನಡುಗಿವೆ. ಭೂಮಿಯ 10 ಕಿಲೋ ಮೀಟರ್ ಆಳದಲ್ಲಿ ಕಂಪನ ಉಂಟಾಗಿದೆ ಎಂದು ತಿಳಿದು ಬಂದಿದೆ.