ಡೈಲಿ ವಾರ್ತೆ: 09/JAN/2025
ಕೋಟದಲ್ಲಿ ಸರಣಿ ಅಪಘಾತ
ಹಲವರಿಗೆ ಗಾಯ
ಕೋಟ: ಟಿಪ್ಪರ್ ಚಾಲಕನ ನಿರ್ಲಕ್ಷ್ಯದಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಪೆಟ್ರೋಲ್ ಬಂಕ್ ಬಳಿ
ಇಂದು ಮಧ್ಯಾಹ್ನ ಸರಣಿ ಅಪಘಾತ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ.
ಟಿಪ್ಪರ್, ಟ್ಯಾಂಕರ್ ಹಾಗೂ ಕೆಎಸ್ಆರ್ ಟಿಸಿ ಬಸ್ ನಡುವೆ ಸರಣಿ ಅಪಘಾತ ನಡೆದಿದೆ.
ಕೋಟದಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಟಿಪ್ಪರ್ ಕೆಟ್ಟುಹೋಗಿದ್ದು, ಅದರ ಚಾಲಕ ರಸ್ತೆ ಮಧ್ಯದಲ್ಲೇ ಇತರ ವಾಹನಗಳಿಗೆ ಅಡಚಣೆಯುಂಟಾಗುವಂತೆ ನಿಲ್ಲಿಸಿಕೊಂಡಿದ್ದ. ವಾಹನ ಕೆಟ್ಟುಹೋದ ಬಗ್ಗೆ ಆತ ಕೋಟ ಪೊಲೀಸರಿಗಾಗಲಿ, ಟೋಲ್ ಸಿಬ್ಬಂದಿಗಳಿಗಾಗಲಿ ತಿಳಿಸಿಲ್ಲ.
ಯಾವುದೇ ಎಚ್ಚರಿಕೆಯ ಸೂಚನಾ ಫಲಕವನ್ನು ಅಳವಡಿಸದೆ ಇರುವುದರಿಂದ, ಹಿಂದಿನಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಅದೇ ದಾರಿಯಲ್ಲಿ ಗೋಕರ್ಣದಿಂದ ಸುಬ್ರಹ್ಮಣ್ಯಕ್ಕೆ ಹೋಗುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಟ್ಯಾಂಕರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಈ ಸರಣಿ ಅಪಘಾತದಲ್ಲಿ ಬಸ್ಸಿನ ಚಾಲಕ ಸೇರಿ ಹಲವು ಪ್ರಯಾಣಿಕರು ಗಾಯ ಗೊಂಡಿದ್ದಾರೆ. ತಕ್ಷಣ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿರುತ್ತಾರೆ.
ಈ ಅಪಘಾತಕ್ಕೆ ಟಿಪ್ಪರ್ ಚಾಲಕನ ಬೇಜವಾಬ್ದಾರಿಯೇ ಕಾರಣ ಎಂದು ತಿಳಿದು ಬಂದಿದೆ. ಅಪಘಾತ ಸಂಭವಿಸಿ ಹಲವರು ಗಾಯಗೊಂಡಿದ್ದರೂ ಟಿಪ್ಪರ್ ಮಾಲಕ ನೆರೆದ ಸಾರ್ವಜನಿಕರೊಂದಿಗೆ ವಾಗ್ವಿವಾದ ನಡೆಸುತ್ತಿದ್ದ ಎಂದು ರಕ್ಷಣೆಗೆ ಧಾವಿಸಿದವರು ತಿಳಿಸಿದ್ದಾರೆ.
ಕೋಟ ಪೊಲೀಸ್ ಠಾಣೆಯ ಎಸ್ಐ ಸುಧಾ ಪ್ರಭು, ಎಎಸ್ಐ ಗೋಪಾಲ ಪೂಜಾರಿ ಹಾಗೂ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಅಪಘಾತದ ವಾಹನಗಳನ್ನು ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.
ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.