ಡೈಲಿ ವಾರ್ತೆ: 11/JAN/2025
ಉದ್ಯಾವರ| ಬೈಕ್ಗೆ ಟ್ರಕ್ ಢಿಕ್ಕಿ- ಸವಾರ ಸ್ಥಳದಲ್ಲೇ ಮೃತ್ಯು, ಟ್ರಕ್ ಬೆಂಕಿಗಾಹುತಿ!
ಉಡುಪಿ: ಬೈಕ್ ಹಾಗೂ ಟ್ರಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು ಟ್ರಕ್ ಕ್ಷಣಾರ್ಧದಲ್ಲೇ ಬೆಂಕಿಗಾಹುತಿಯಾದ ಘಟನೆ ಜ. 10 ರಂದು ಶುಕ್ರವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಕೊರಂಗ್ರಪಾಡಿ ಬಳಿ ಸಂಭವಿಸಿದೆ.
ಮೃತಪಟ್ಟ ಬೈಕ್ ಸವಾರ ಪಣಿಯೂರು ನಿವಾಸಿ ಅವಿನಾಶ್ ಆಚಾರ್ಯ (19) ಎಂದು ಗುರುತಿಸಲಾಗಿದೆ.
ಉಡುಪಿಯಲ್ಲಿ ಪ್ಯಾರಾ ಮೆಡಿಕಲ್ ಕಲಿಯುತ್ತಿದ್ದ ಯುವಕ ರಾತ್ರಿ ಪರಿಚಯಸ್ಥರ ಮನೆಯ ಕಾರ್ಯಕ್ರಮಕ್ಕೆ ತೆರಳಿ ಕೊರಂಗ್ರಪಾಡಿಯಿಂದ ಉದ್ಯಾವರ ಮೂಲಕವಾಗಿ ಪಣಿಯೂರಿಗೆ ಮರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಟ್ರಕ್ ಢಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯವಾಗಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಘಟನೆಯ ಮರುಕ್ಷಣ ಟ್ರಕ್ ನಲ್ಲೂ ಬೆಂಕಿ ಕಾಣಿಸಿಕೊಂಡಿದ್ದು, ಟ್ರಕ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಮದ್ಯರಾತ್ರಿ ಘಟನೆ ಸಂಭವಿಸಿದ ಕಾರಣ ತುರ್ತು ಪರಿಹಾರ ಕಾರ್ಯಾಚರಣೆ ನಡೆಸಲು ಸಾಧ್ಯವಾಗದೇ ಬೆಂಕಿಗೆ ಆಹುತಿಯಾಗುವಂತಾಗಿದೆ.
ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.