ಡೈಲಿ ವಾರ್ತೆ: 11/JAN/2025
ಕಾರವಾರ: ಕಾರ್ಖಾನೆಯಲ್ಲಿ ಕ್ಲೋರಿನ್ ಸೋರಿಕೆ – 18 ಕಾರ್ಮಿಕರು ಅಸ್ವಸ್ಥ
ಕಾರವಾರ: ಕ್ಲೋರಿನ್ ಸೋರಿಕೆಯಾಗಿ 18 ಜನ ಕಾರ್ಮಿಕರು ಅಸ್ವಸ್ಥರಾದ ಘಟನೆ ಕಾರವಾರದ ಬಿಣಗಾದಲ್ಲಿನ ಗ್ರಾಸಿಂ ಇಂಡಸ್ಟ್ರೀಸ್‍ನಲ್ಲಿ ನಡೆದಿದೆ.
ಶನಿವಾರ ಮಧ್ಯಾಹ್ನದ ವೇಳೆ ಕಾರ್ಖಾನೆಯಲ್ಲಿ ವಿದ್ಯುತ್ ಸಮಸ್ಯೆಯಿಂದ ಕ್ಲೋರಿನ್ ಸ್ಟೋರ್‍ನಲ್ಲಿ ಲೀಕ್ ಆಗಿದೆ. ಇದರಿಂದ ಅಲ್ಲಿ ಕೆಲಸ ಮಾಡುತ್ತಿದ್ದ 18 ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದ ಕಾರ್ಮಿಕರು ಕರ್ನಾಟಕ, ಉತ್ತರಪ್ರದೇಶ, ಬಿಹಾರ ಮೂಲದವರು ಎಂದು ತಿಳಿದು ಬಂದಿದೆ.
ಅಸ್ವಸ್ಥಗೊಂಡ 14 ಕಾರ್ಮಿಕರಿಗೆ ಕಾರವಾರದ ಕ್ರಿಮ್ಸ್ ಆಸ್ಪತ್ರೆ ಹಾಗೂ ಗ್ರಾಸಿಂ ಪ್ರಥಮ ಚಿಕಿತ್ಸಾ ಘಟಕದಲ್ಲಿ ನಾಲ್ವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಹುತೇಕರು ಉಸಿರಾಟ, ಕೆಮ್ಮಿನಿಂದ ಬಳಲುತಿದ್ದಾರೆ. ಯಾರ ಜೀವಕ್ಕೂ ಆಪಾಯವಿಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಕ್ಲೋರಿನ್ ಲೀಕ್ ಆದರೂ ಕಾರ್ಖಾನೆ ಆಡಳಿತ ಸೈರನ್ ಸಹ ಹಾಕದೇ ನಿರ್ಲಕ್ಷ ಮಾಡಿದ್ದಾರೆ. ಇದರಿಂದ ಕಾರ್ಮಿಕರಿಗೆ ಹಾಗೂ ಸ್ಥಳೀಯ ಜನರಿಗೆ ತೊಂದರೆಯಾಗುತ್ತಿದೆ ಎಂದು ಕಾರ್ಖಾನೆ ಎದುರು ಕಾರ್ಮಿಕರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.