ಡೈಲಿ ವಾರ್ತೆ: 13/JAN/2025

ವಿಜಯಪುರ| ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆಗೆ ಯತ್ನ

ವಿಜಯಪುರ: ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ನಾಲ್ವರು ಮಕ್ಕಳು ಜಲಸಮಾಧಿಯಾದ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬೇನಾಳ ಬಳಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ನಡೆದಿದೆ.

ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ತನು ನಿಂಗರಾಜ ಭಜಂತ್ರಿ (5), ರಕ್ಷಾ ನಿಂಗರಾಜ ಭಜಂತ್ರಿ (3), ಹಸನ್ ನಿಂಗರಾಜ ಭಜಂತ್ರಿ ಹಾಗೂ ಹುಸೇನ್ ನಿಂಗರಾಜ ಭಜಂತ್ರಿ (13 ತಿಂಗಳು) ಮೃತ ಮಕ್ಕಳು. ನಾಲ್ವರು ಮಕ್ಕಳ ತಾಯಿ ಭಾಗ್ಯ ಭಜಂತ್ರಿಯನ್ನ ಸ್ಥಳಿಯರು ಕಾಪಾಡಿದ್ದಾರೆ.

ಕೌಟುಂಬಿಕ ಕಾರಣವೇ ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಬಹುದಿನಗಳಿಂದ ಭಾಗ್ಯಳ ಪತಿ ನಿಂಗರಾಜ ಅಣ್ಣತಮ್ಮಂದಿರ ಮಧ್ಯೆ ಆಸ್ತಿಗಾಗಾಗಿ ಕಲಹ ನಡೆದಿತ್ತು. ಆಸ್ತಿಯಲ್ಲಿ ಬಿಡಿಗಾಸು ಕೊಡಲ್ಲ ಅಂತಾ ಲಿಂಗರಾಜ್‌ಗೆ ಅಣ್ಣತಮ್ಮಂದಿರು ಹೇಳಿದ್ದರು. ಅದೆ ರೀತಿ ಇಂದು ಕೂಡ ಪರಸ್ಪರ ಗಲಾಟೆ ನಡೆದಿತ್ತು. ಗಲಾಟೆಯ ನಂತರ ಮನೆಯಿಂದ ತೆಲಗಿಗೆ ಹೊರಟಾಗ ಕಾಲುವೆ ಹತ್ತಿರ ನಿಂಗರಾಜನ ದ್ವಿಚಕ್ರ ವಾಹನದ ಪೆಟ್ರೋಲ್ ಖಾಲಿ ಆಗಿದೆ. ಆಗ ಪೆಟ್ರೋಲ್ ತರಲೆಂದು ನಿಂಗರಾಜ ಸ್ವಲ್ಪ ದೂರ ಹೋಗುತ್ತಿದ್ದಂತೆ ಭಾಗ್ಯ ಮಕ್ಕಳೊಂದಿಗೆ ಕಾಲುವೆಗೆ ಹಾರಿದ್ದಾಳೆ ಎಂದು ಪತಿ ನಿಂಗರಾಜ ಕಣ್ಣೀರು ಹಾಕುತ್ತಿದ್ದಾನೆ.

ಸದ್ಯ ಇಬ್ಬರು ಹೆಣ್ಣು ಮಕ್ಕಳ ಮೃತದೇಹವನ್ನು ಮೀನುಗಾರರು ಹೊರತೆಗೆದಿದ್ದಾರೆ. ಇಬ್ಬರು ಗಂಡು ಮಕ್ಕಳ ಶವಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ನಿಡಗುಂದಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ಶವ ಶೋಧಕಾರ್ಯ ಮುಂದುವರಿದಿದೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿಂಗರಾಜ ಹಾಲಿ ತೆಲಗಿ ಗ್ರಾಮ ಪಂ ಸದಸ್ಯನಾಗಿದ್ದು, ಮೊಹರಂನಲ್ಲಿ ದೇವರನ್ನು ಹೊರುತ್ತಿದ್ದರು. ಈ ಕಾರಣದಿಂದ ಗಂಡು ಮಕ್ಕಳಿಗೆ ಹಸೇನ್‌ ಹಾಗೂ ಹುಸೇನ್‌ ಎಂದು ಹೆಸರಿಡಲಾಗಿದೆ.