ಡೈಲಿ ವಾರ್ತೆ: 14/JAN/2025
ಕಲ್ಲಡ್ಕ| ರಾಷ್ಟ್ರೀಯ ಹೆದ್ದಾರಿಯಲ್ಲಿ ಡೀಸೆಲ್ ಟ್ಯಾಂಕರ್ ಪಲ್ಟಿ, ಚಾಲಕ ಪಾರು!
ಬಂಟ್ವಾಳ : ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಡೀಸೆಲ್ ತುಂಬಿದ ಟ್ಯಾಂಕರ್ ಪಲ್ಟಿಯಾದ ಘಟನೆ ಮಂಗಳವಾರ ಮದ್ಯಾಹ್ನದ ವೇಳೆ ನಡೆದಿದೆ.
ಟ್ಯಾಂಕರ್ ನಲ್ಲಿ ಸಣ್ಣದಾದ ತೂತು ಆಗಿದ್ದು, ಅ ಮೂಲಕ ಡಿಸೇಲ್ ಸೋರಿಕೆ ಕಂಡುಬಂದಿದೆ. ಹಾಗಾಗಿ ಕೆಲ ಹೊತ್ತು ಕಲ್ಲಡ್ಕ ಪರಿಸರದಲ್ಲಿ ಆತಂಕದ ವಾತವರಣ ನಿರ್ಮಾಣವಾಗಿತ್ತು. ಘಟನೆಯಿಂದ ಗಂಟೆಗಳಿಗೂ ಅಧಿಕ ಹೊತ್ತು ಸಂಚಾರಕ್ಕೆ ಅಡಚಣೆಯಾಗಿದ್ದು, ಚಾಲಕನಿಗೆ ಯಾವುದೇ ಗಾಯವಿಲ್ಲದೆ ಪಾರಾಗಿದ್ದಾನೆ.
ಮಂಗಳೂರಿನಿಂದ ಚೆನ್ನೈಗೆ ಡೀಸೆಲ್ ತುಂಬಿಸಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಚಾಲಕ ಕಲ್ಲಡ್ಕ ಸರ್ವೀಸ್ ರೋಡ್ ನಲ್ಲಿ ವಿರುದ್ದ ದಿಕ್ಕಿನಲ್ಲಿ ಸಂಚರಿಸಿ ಎಡವಟ್ಟ ಮಾಡಿಕೊಂಡು ಕೊನೆಗೆ ಚರಂಡಿಗೆ ಪಲ್ಟಿಯಾಗಿದೆ.
ಇಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಮೊದಲೇ ವಾಹನಗಳು ಸಂಚಾರ ಮಾಡುವುದು ಸಂಕಷ್ಟದ ಸ್ಥಿತಿಯಲ್ಲಿ. ಇದೀಗ ಲಾರಿ ಪಲ್ಟಿಯಾದ ಕಾರಣ ಸುಮಾರು ಒಂದು ಗಂಟೆಗಳ ಕಾಲ ವಾಹನಗಳು ಅಲ್ಲೇ ಬಾಕಿಯಾಗಿದ್ಧವು. ಬಂಟ್ವಾಳ ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ, ಕ್ರೇನ್ ತರಿಸಿ ಲಾರಿಯನ್ನು ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.