ಡೈಲಿ ವಾರ್ತೆ: 16/JAN/2025

ಮಂಗಳೂರು| ಮಾದಕ ದ್ರವ್ಯ ಮತ್ತು ತಲವಾರು ಹಿಡಿದು ಓಡಾಡುತ್ತಿದ್ದ ಆರೋಪಿಯ ಬಂಧನ!

ಮಂಗಳೂರು: ಪಣಂಬೂರಿನ ಎನ್‌ಎಂಪಿಟಿ ಹಳೆ ಟ್ರಕ್ ಯಾರ್ಡ್ ಬಳಿ ಮಾದಕ ವಸ್ತು ಹಾಗೂ ತಲವಾರು ಹಿಡಿದುಕೊಂಡ ವ್ಯಕ್ತಿಯೊಬ್ಬನನ್ನು ಖಚಿತ ಮಾಹಿತಿ ಮೇರೆಗೆ ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ಮಾದಕ ವಸ್ತು ಮತ್ತು ತಲವಾರು ಇಟ್ಟುಕೊಂಡು ಓಡಾಡುತ್ತಿದ್ದ ಆರೋಪಿ ಕಸಬ ಬೆಂಗ್ರೆಯ ಉಮ್ಮರ್ ಫಾರೂಕ್ ಯಾನೆ ಮಟನ್ ಫಾರೂಕ್ ( 32) ಎಂಬಾತನನ್ನು ಬುಧವಾರ ಸಂಜೆ ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ಪಣಂಬೂರು ಎನ್‌ಎಂಪಿಎ ಹಳೆ ಟ್ರಕ್ ಯಾರ್ಡ್ ಕಡೆಯಿಂದ ಪಂಪ್‌ಹೌಸ್ ಕಡೆಗೆ ಹೋಗುವ ರಸ್ತೆಯ ಬದಿ ಮಾದಕ ವಸ್ತು ಮತ್ತು ತಲವಾರನ್ನು ಹಿಡಿದು ತಿರುಗಾಡುತ್ತಿದ್ದ ಬಗ್ಗೆ ಎಸ್ಸೈ ಶ್ರೀಕಲಾ ಕೆ.ಟಿ.ಗೆ ಲಭಿಸಿದ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಆರೋಪಿಯ ಬಳಿಯಿದ್ದ ತಲವಾರು ಹಾಗು 1.72 ಗ್ರಾಮ್ ತೂಕದ 4,000 ರೂ. ಮೌಲ್ಯದ ಮಾದಕ ವಸ್ತುವನ್ನು ವಶಪಡಿ ಸಲಾಗಿದೆ. ಆರೋಪಿಯ ವಿರುದ್ಧ ಪಣಂಬೂರು, ಕಂಕನಾಡಿ ನಗರ, ಉಳ್ಳಾಲ, ಮಂಗಳೂರು ದಕ್ಷಿಣ, ಮಂಗಳೂರು ಪೂರ್ವ, ಉಪ್ಪಿನಂಗಡಿ, ಚಿಕ್ಕಮಗಳೂರು ಜಿಲ್ಲೆಯ ಯಗಟಿ ಪೊಲೀಸ್ ಠಾಣೆಗಳಲ್ಲಿ 9ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ.

ಪಣಂಬೂರು ಠಾಣೆಯ ಇನ್‌ಸ್ಪೆಕ್ಟರ್ ಸಲೀಂ ಅಬ್ಬಾಸ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸ್ಸೈಗಳಾದ ಶ್ರೀಕಲಾ ಕೆ.ಟಿ, ಜ್ಞಾನಶೇಖರ, ಅಪರಾಧ ವಿಭಾಗದ ಎಚ್‌ಸಿಗಳಾದ ಪ್ರೇಮಾನಂದ, ಸಯ್ಯದ್ ಇಮ್ತಿಯಾಝ್, ಜೇಮ್ಸ್, ಕಾನ್‌ಸ್ಟೇಬಲ್‌ಗಳಾದ ಎಂ. ಫಕೀರೇಶ, ಬಸವರಾಜ್ ಗುರಿಕಾರ್, ಶರಣಪ್ಪಗೊಲ್ಲಾರ್ ಕಾರ್ಯಾಚರಣೆಯಲ್ಲಿ ಪಾಲ್‌ಗೊಂಡಿದ್ದರು.