ಡೈಲಿ ವಾರ್ತೆ: 18/JAN/2025
ಕೋರ್ಟ್‌ನಲ್ಲಿ ತನ್ನದೇ ರಾಸಲೀಲೆಯ ವಿಡಿಯೋ ನೋಡಿದ ಪ್ರಜ್ವಲ್ ರೇವಣ್ಣ
ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಇಂದು ಕೋರ್ಟ್‌ನಲ್ಲಿ ಪ್ರಜ್ವಲ್ ರೇವಣ್ಣ ತನ್ನದೇ ಆದ ರಾಸಲೀಲೆಯ ವೀಡಿಯೋವನ್ನು ವೀಕ್ಷಿಸಿದ್ದಾರೆ.
ಮುಚ್ಚಿದ ಕೋರ್ಟ್‌ನಲ್ಲಿ ಪ್ರಜ್ವಲ್ ಹಾಗೂ ಅವರ ಪರ ವಕೀಲರು ಮತ್ತು ತಾಂತ್ರಿಕ ತಜ್ಞರ ತಂಡ ಕೂಡ ವೀಡಿಯೋವನ್ನು ವೀಕ್ಷಿಸಿದೆ.
ಇಂದು (ಜನವರಿ 18) ಬೆಳಗ್ಗೆ ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಅವರ ವಿಚಾರಣೆ ಮಾಡಲಾಯಿತು. ಪರಪ್ಪನ ಅಗ್ರಹಾರ ಜೈಲಿನಿಂದ ಪ್ರಜ್ವಲ್ ರೇವಣ್ಣ ಅವರನ್ನು ಕರೆ ತಂದು ಮುಚ್ಚಿದ ಕೋರ್ಟ್‌ನಲ್ಲಿ ವೀಡಿಯೋವನ್ನು ವೀಕ್ಷಿಸಲಾಯಿತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಜ್ವಲ್ ಅತ್ಯಾಚಾರದ ವೀಡಿಯೋಗಳನ್ನು ಇಂದು ವೀಕ್ಷಿಸಲಾಗಿದೆ.
ಪ್ರಜ್ವಲ್ ಪರ ವಕೀಲರಾದ ಅರುಣ್ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿ, ಸುದ್ದಿ ವಾಹಿನಿಗಳಲ್ಲಿ ಪ್ರಜ್ವಲ್ ಅವರಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಪ್ರಕಟಿಸದಂತೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು. ಆದರೆ ಕೋರ್ಟ್ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಮಾಧ್ಯಮದವರಿಗೆ ಈ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಬಳಿಕ ಇಲ್ಲ ಸಲ್ಲದ ಕಾರಣ ಹೇಳಿ ವೀಡಿಯೋ ವೀಕ್ಷಣೆಗೆ ಸಮಯ ನೀಡಬೇಕು. ತಮ್ಮ ತಾಂತ್ರಿಕ ತಜ್ಞರು ಬಂದಿಲ್ಲ ಎಂದು ಪ್ರಜ್ವಲ್ ಪರ ವಕೀಲರು ವಾದಿಸಿದರು. ಇದಕ್ಕೆ ಕೋಪಗೊಂಡ ನ್ಯಾಯಾಧೀಶರು, ನೀವು ಸಮಯ ವಿಸ್ತರಣೆಗೆ ಏನು ಬೇಕು ಅದನ್ನೆಲ್ಲಾ ವಾಡುತ್ತಿದ್ದೀರಿ. ನಿಮಗೆ ಬೇಡ ಅಂದರೆ ಮಹಿಳಾ ನ್ಯಾಯಾಧೀಶರು ಬೇಕು ಎಂದು ಅರ್ಜಿ ಹಾಕಬಹುದು ಎಂದು ತಾರಾಟೆ ತೆಗೆದುಕೊಂಡಿದ್ದಾರೆ.
ಬಳಿಕ ಗುರುತುಪಡಿಸಿದ ತಾಂತ್ರಿಕ ತಜ್ಞರು, ಪ್ರಜ್ವಲ್ ಪರ ವಕೀಲರು ಮುಚ್ಚಿದ ಕೋರ್ಟ್‌ನಲ್ಲಿ ವಿಡಿಯೋ ವೀಕ್ಷಣೆ ಮಾಡಿದರು. ಈ ವೇಳೆ ಕೋರ್ಟ್‌ನಲ್ಲಿ ಎಸ್‌ಪಿಪಿ, ಪ್ರಕರಣದ ತನಿಖಾಧಿಕಾರಿ ಹೊರತು ಪಡಿಸಿ ಬೇರೆ ಯಾರಿಗೂ ಕೂಡ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ನನ್ನ ಮೊಬೈಲ್ ಕೊಡಿ ಎಂದ ಕೋರ್ಟ್‌ಗೆ ಮನವಿ ಮಾಡಿದ ಪ್ರಜ್ವಲ್: ಪ್ರಜ್ವಲ್ ರೇವಣ್ಣ ತಮ್ಮ ಮೊಬೈಲ್ ಹಿಂದಿರುಗಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ಈ ಮೊಬೈಲ್‌ನಲ್ಲಿ 2000 ವೀಡಿಯೋ ಹಾಗೂ 15000 ಫೋಟೋಗಳು ಇವೆ ಎನ್ನಲಾಗಿದೆ. ಈ ಫೋನ್ ಅನ್ನು ವಾಪಾಸ್ ನೀಡುವಂತೆ ಪ್ರಜ್ವಾಲ್ ಬೇಡಿಕೆ ಇಟ್ಟಿದ್ದರು. ಇದಕ್ಕಾಗಿ ತಮ್ಮ ವಕೀಲರೊಂದಿಗೆ ಕೋರ್ಟ್‌ಗೆ ಅರ್ಜಿ ಕೂಡ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ದಾಖಲೆಗಳು ಇರುವ ಮೊಬೈಲ್ ಫೋನ್ ನಿಮಗೆ ಯಾಕೆ ಬೇಕು ಎಂದು ಪ್ರಶ್ನೆ ಮಾಡಿದ್ದರು. ಮೊಬೈಲ್ ಕೊಡಲಾಗುವುದಿಲ್ಲ. ಆದರೆ ನಿಮ್ಮ ವಿಡಿಯೋ ಹಾಗೂ ಫೋಟೋಗಳನ್ನು ಕೋರ್ಟ್‌ನಲ್ಲಿಯೇ ವೀಕ್ಷಣೆ ಮಾಡುವುದಕ್ಕೆ ಅವಕಾಶ ನೀಡಲಾಗುವುದು ಎಂದು ಕೋರ್ಟ್ ಹೇಳಿತ್ತು. ಕಾನೂನು ಎಲ್ಲರಿಗೂ ಒಂದೇ ಮಹಿಳೆಯರ ಖಾಸಗಿತನ ಗೌರವಿಸುವುದು ಎಲ್ಲರ ಕರ್ತವ್ಯ. ಪ್ರಜ್ವಲ್ ರೇವಣ್ಣ ಅಂದ ಮಾತ್ರಕ್ಕೆ ಕಾನೂನನ್ನು ಬದಲಾಯಿಸಲು ಆಗುವುದಿಲ್ಲ ಎಂದು ಕೋರ್ಟ್ ಹೇಳಿತ್ತು.