ಡೈಲಿ ವಾರ್ತೆ: 20/JAN/2025

ಉಳ್ಳಾಲ| ಕೋಟೆಕಾರು ಬ್ಯಾಂಕ್​​ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಉಳ್ಳಾಲ: ಭಾರೀ ಸದ್ದು ಮಾಡಿದ್ದ ಕೋಟೆಕಾರು ಸಹಕಾರಿ ಬ್ಯಾಂಕ್​ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಬ್ಯಾಂಕ್​ನಲ್ಲಿ ಸುಮಾರು 10 ರಿಂದ 12 ಕೋಟಿಯನ್ನು ದರೋಡೆ ಮಾಡಿದ ಬಳಿಕ ಆರೋಪಿಗಳು ತಿರುವನ್ವೇಲಿಗೆ ಪರಾರಿಯಾಗಿದ್ದರು. ಇದೀಗ ಮಂಗಳೂರು ಪೊಲೀಸರು ಕಾರ್ಯಚರಣೆ ನಡೆಸಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಖುದ್ದು ಮಂಗಳೂರು ಪೊಲೀಸ್​​ ಆಯುಕ್ತ ಅನುಪಮ್ ಅಗರ್ವಾಲ್​ ಖಚಿತಪಡಿಸಿದ್ದಾರೆ.

ದರೋಡೆಕೋರರ ಬಂಧನದ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್‌ ಮಾಹಿತಿ ನೀಡಿದ್ದು, ತಮಿಳುನಾಡಿನ ವಿವಿಧ ಪ್ರದೇಶದಲ್ಲಿ ಮೂವರು ಆರೋಪಿಗಳ ಬಂಧನವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕು ಕೆ.ಸಿ.ರೋಡ್‌ನ ಶಾಖೆಯಲ್ಲಿ ಜನವರಿ 17ರಂದು ಕೋಟೆಕಾರು ಬ್ಯಾಂಕ್​​ನಲ್ಲಿ ದರೋಡೆ ಮಾಡಿದ್ದರು. ಮಹಾರಾಷ್ಟ್ರದ ಕಾರು ಬಳಸಿ ಕೋಟೆಕಾರು ಬ್ಯಾಂಕ್​​ನಲ್ಲಿ ಕೃತ್ಯವೆಸಗಿದ್ದರು. ಬ್ಯಾಂಕ್ ದರೋಡೆ ಬಳಿಕ ತಮಿಳುನಾಡಿನ ತಿರುನೆಲ್ವೇಲಿಗೆ ಪರಾರಿ ಆಗಿದ್ದರು. ಬಂಧಿತರಿಂದ 2 ಗೋಣಿಚೀಲ, ತಲ್ವಾರ್‌, 2 ಪಿಸ್ತೂಲ್‌ ಜಪ್ತಿ ಮಾಡಿದ್ದೇವೆ. ಬಂಧಿತ ಆರೋಪಿಗಳು ತಮಿಳುನಾಡಿನ ತಿರುನೆಲ್ವೇಲಿ ಮೂಲದವರು ಎಂದು ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡು ಮೂಲದ ಮುರುಗಂಡಿ ದೇವರ್, ಪ್ರಕಾಶ್ ಅಲಿಯಾಸ್ ಜೋಶ್ವಾ , ಮನಿವೆನನ್ ಬಂಧಿತರು. ಇನ್ನು ಬಂಧಿತರಿಂದ ಕಳ್ಳತನಕ್ಕೆ ಬಳಸಿದ್ದ ಫಿಯೆಟ್ ಕಾರು, ಹಣ, ಚಿನ್ನ ತುಂಬಿಕೊಂಡು ಹೋಗಿದ್ದ ಎರಡು ಗೋಣಿ ಚೀಲಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.