ಡೈಲಿ ವಾರ್ತೆ: 21/JAN/2025
ಕೋಟ| ಕದ್ರಿಕಟ್ಟಿನಲ್ಲಿ ಸಾರ್ವಜನಿಕರು ನಡೆದಾಡುವ ರಸ್ತೆಗೆ ಅಡ್ಡಿ: ತಹಶೀಲ್ದಾರ್ ಸಮ್ಮುಖ ತೆರವು
ಕೋಟ: ಕೋಟತಟ್ಟು ಗ್ರಾ.ಪಂ. ವ್ಯಾಪ್ತಿಯ ಕದ್ರಿಕಟ್ಟು ಭಾಗದಲ್ಲಿ ಸಾರ್ವಜನಿಕರು ನಡೆದಾಡುವ ದಾರಿಯನ್ನು ಸ್ಥಳೀಯರೋರ್ವರು ಕಂಪೌಂಡ್ ನಿರ್ಮಿಸುವ ಮೂಲಕ ತಡೆಯೊಡ್ಡಿದ್ದು ಈ ಬಗ್ಗೆ ದೂರು ವ್ಯಕ್ತವಾದ ಹಿನ್ನಲೆಯಲ್ಲಿ ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ ಸ್ಥಳಕ್ಕಾಗಮಿಸಿ ಅಧಿಕಾರಿಗಳ ಸಮ್ಮುಖದಲ್ಲೇ ಅಡ್ಡಿಯನ್ನು ತೆರವುಗೊಳಿಸಿದ
ಘಟನೆ ಜ. 21ರಂದು ಮಂಗಳವಾರ ಬೆಳಿಗ್ಗೆ ನಡೆಯಿತು.
ಕದ್ರಿಕಟ್ಟಿನ ಸ್ಥಳೀಯ ಕೆಲವು ಮನೆಗಳಿಗೆ ಹಾಗೂ ಗದ್ದೆಗೆ ತೆರಳಲು ಈ ಭಾಗದಲ್ಲಿ 3 ಅಡಿ ಅಗಲದ ಕಾಲು ದಾರಿ ಹಲವು ದಶಕಗಳಿಂದ ಇದ್ದು ಅದನ್ನು ಇತ್ತೀಚೆಗೆ ಸ್ಥಳೀಯರೋರ್ವರು ಅಡ್ಡಿಪಡಿಸಿದ್ದರು ಹಾಗೂ ಏಕಾಏಕಿ ಕಂಪೌಂಡ್ ನಿರ್ಮಿಸುವ ಮೂಲಕ ಕಾಲು ದಾರಿಯನ್ನು
ಶಾಶ್ವತವಾಗಿ ಮುಚ್ಚಿದ್ದರು. ಇದರಿಂದಾಗಿ ರಸ್ತೆ ಸಂಪರ್ಕವಿಲ್ಲದ ಎರಡು-ಮೂರು ಮನೆಯವರು
ಮನೆಗೆ ಬೀಗ ಹಾಕಿ ಬೇರೆ ಕಡೆ ಬಾಡಿಗೆ ಮನೆಯಲ್ಲಿ ವಾಸಿಸುವ ಪ್ರಸಂಗ ಎದುರಾಗಿದೆ ಎಂದು
ಸ್ಥಳೀಯರು ಗ್ರಾ.ಪಂ. ಹಾಗೂ ತಹಶೀಲ್ದಾರರಿಗೆ ದೂರು ನೀಡಿದ್ದರು.
ಸ್ಥಳ ಪರಿಶೀಲಿಸಿದ ತಹಶೀಲ್ದಾರರು ನಡೆದಾಡುವ 3 ಅಡಿ ರಸ್ತೆಯನ್ನು ಅಡ್ಡಿಪಡಿಸುವ ಅಧಿಕಾರ ಯಾರಿಗೂ ಇಲ್ಲ ಆದ್ದರಿಂದ ರಸ್ತೆಯ ಅಡ್ಡಿಯನ್ನು ತೆರವುಗೊಳಿಸುವಂತೆ ಮನವಿ ಮಾಡಿದರು. ಆದರೆ ಈ ಬಗ್ಗೆ ಪೂರಕವಾಗಿ ಸ್ಪಂದಿಸದಿರುವುದರಿಂದ ಮಂಗಳವಾರ ಕೋಟ
ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿ ಸ್ಥಳೀಯರ ಸಮ್ಮುಖದಲ್ಲಿ ತಡೆಗೋಡೆ ತೆರವುಗೊಳಿಸಿ, ಹಿಂದನಂತೆ 3 ಅಡಿ ರಸ್ತೆಯನ್ನು ಮರುಸ್ಥಾಪಿಸಿದರು. ಹಲವು ವರ್ಷಗಳಿಂದ ಇರುವ ಈ
ಸಮಸ್ಯೆಯನ್ನು ಬಗೆಹರಿಸಿದ ತಹಶೀಲ್ದಾರ್ ಅವರಿಗೆ ಸ್ಥಳೀಯರು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಸತೀಶ್ ಬಾರಿಕೆರೆ, ಕೋಟ ಠಾಣೆಯ ಕ್ರೈಂವಿಭಾಗದ ಉಪನಿರೀಕ್ಷಕಿ ಸುಧಾ ಪ್ರಭು, ಎಎಸ್ಐ ಜಯಪ್ರಕಾಶ್ ಹಾಗೂ ಸಿಬಂದಿಗಳು, ಆರ್.ಐ. ಮಂಜು ಬಿಲ್ಲವ, ಗ್ರಾಮ ಆಡಳಿತಾಧಿಕಾರಿ ಚೆಲುವರಾಜು, ಪಿಡಿಒ ರವೀಂದ್ರ ರಾವ್,
ಸಾಮಾಜಿಕ ಹೋರಾಟಗಾರ ದಿನೇಶ್ ಗಾಣಿಗ ಕೋಟ ಮೊದಲಾದವರು ಇದ್ದರು.