ಡೈಲಿ ವಾರ್ತೆ: 21/JAN/2025
ಜನವರಿ 24 ರಿಂದ ಅಂಕೋಲಾದಲ್ಲಿ ಗಣರಾಜ್ಯೋತ್ಸವ ಕಫ್‌ಗೆ ಚಾಲನೆ
ಅಂಕೋಲಾ| ಕಾರ್ಯನಿರತ ಪತ್ರಕರ್ತರ ಸಂಘ ಅಂಕೋಲಾ ಇದರ ಆಶ್ರಯದಲ್ಲಿ 14 ನೇ ವರ್ಷದ ಗಣರಾಜ್ಯೋತ್ಸವ ಕಪ್-2025 ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಯು ಜನವರಿ 24,25,26 ರಂದು ಜೈಹಿಂದ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಪಂದ್ಯಾವಳಿಯ ಆಮಂತ್ರಣ ಪತ್ರಿಕೆಯನ್ನು ಹಿರಿಯ ಪತ್ರಕರ್ತರಾದ ವಿಠ್ಠಲದಾಸ ಕಾಮತ್ ಹಾಗೂ ಕೆ.ರಮೇಶ ಬಿಡುಗಡೆಗೊಳಿಸಿದರು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಪತ್ರಕರ್ತ ವಿಠ್ಠಲದಾಸ ಕಾಮತ ಈ ಪಂದ್ಯಾವಳಿಯು ವಿವಿಧ ಇಲಾಖೆಯ ಮತ್ತು ಸಮಾಜದ ಮುಖ್ಯವಾಹಿನಿಯ ವಿವಿಧ ವೃತ್ತಿಗಳಲ್ಲಿ ತೊಡಗಿದ ಎಲ್ಲ ಉದ್ಯೋಗಿಗಳನ್ನು ಒಂದಾಗಿಸಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತದ್ದು ಸೌಹಾರ್ದಯುತವಾದ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ. ವಿಶೇಷವಾಗಿ ಪತ್ರಕರ್ತ ರಾಘು ಕಾಕರಮಠ ಮತ್ತು ತಂಡದವರು ಯಶಸ್ವಿಯಾಗಿ ಪಂದ್ಯಾವಳಿಯನ್ನು ನಡೆಸಿಕೊಂಡು ಬರುತ್ತಿದ್ದು, ಇದು ಇನ್ನಷ್ಟು ಮುಂದುವರಿಯಬೇಕು ಹಾಗೂ ಎಲ್ಲರೂ ಸೌಹಾರ್ದಯುತವಾಗಿ ಪರಿಗಣಿಸಿ ಅಂಕೋಲೆಯ ಕೀರ್ತಿಯನ್ನು ಹೆಚ್ಚಿಸಬೇಕೆಂದು ವಿನಂತಿಸಿದರು.
ಹಿರಿಯ ಪತ್ರಕರ್ತ ಕೆ. ರಮೇಶ ಮಾತನಾಡಿ ಪ್ರಜಾರಾಜ್ಯೋತ್ಸವದ ಅಂಗವಾಗಿ ಕಳೆದ 14 ವರ್ಷಗಳಿಂದ ಅಂಕೋಲಾ ಪತ್ರಕರ್ತರ ವೇದಿಕೆ ಹಮ್ಮಿಕೊಳ್ಳುವಂತ ಕ್ರಿಕೆಟ್ ಪಂದ್ಯಾವಳಿ ಈ ವರ್ಷವೂ ಸಹ ಅರ್ಥಪೂರ್ಣವಾಗಿ ನಡೆಸಲು ನಮ್ಮ ತಂಡ ಸಿದ್ದತೆ ಮಾಡಿಕೊಂಡಿದೆ. ಬಾಬಾಸಾಹೇಬ್ ಅಂಬೇಡ್ಕರ್‌ರವರು ನಮ್ಮ ದೇಶಕ್ಕೆ ಸಂವಿಧಾನವನ್ನು ಸಮರ್ಪಣೆ ಮಾಡಿದ ದಿನದಂದು ಎಲ್ಲ ಇಲಾಖೆಗಳು, ಸಾರ್ವಜನಿಕ ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಈ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ಕಳೆದ ಎಲ್ಲ ಆವೃತಿಯ ಪಂದ್ಯಾವಳಿಗೆ ಸಹಕಾರ ನೀಡಿದಂತೆ ಈ ವರ್ಷವೂ ಸಹ ಸಹಕಾರ ನೀಡಬೇಕೆಂದು ಎಲ್ಲರಲ್ಲಿ ಮನವಿ ಮಾಡಿದರು.
ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಮಾತನಾಡಿ ಕಳೆದ 14 ವರ್ಷದ ಹಿಂದೆ ಇಲ್ಲಿ ತಹಸೀಲ್ದಾರ ಆಗಿದ್ದ ಡಾ. ಉದಯಕುಮಾರ ಶೆಟ್ಟಿ ಹಾಗೂ ಬೆಂಗಳೂರಿನಲ್ಲಿ ಸಿಪಿಐ ಆಗಿರುವ ಜಯರಾಜ್ ಎಚ್. ಅವರ ಕನಸಿನ ಕೂಸಾಗಿ ಹುಟ್ಟಿಕೊಂಡ ಈ ಪಂದ್ಯಾವಳಿಯಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ 18 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದೆ. ರಾಷ್ಟ್ರೀಯ ಉತ್ಸವದ ಈ ಸುಸಂದರ್ಭದಲ್ಲಿ ಪಂದ್ಯಾವಳಿಯ ಆಯೋಜನೆಯು ಹೊಸದೊಂದು ಮೆರಗನ್ನು ತಂದಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ವಿಧ್ಯಾಧರ ಮೊರಬಾ, ಸಂಘದ ಪತ್ರಕರ್ತರಾದ ಸುಭಾಷ ಕಾರೇಬೈಲ, ವಾಸುದೇವ ಗುನಗಾ, ನಾಗರಾಜ್ ಶೆಟ್ಟಿ, ಮೋಹನ ದುರ್ಗೆಕರ, ದಿನಕರ ನಾಯ್ಕ, ಅನುಪ ಗುನಗಾ, ನಾಗರಾಜ್ ಮಂಜಗುಣಿ, ನಾಗರಾಜ್ ಜಾಂಬಳೇಕರ, ಅಕ್ಷಯ ನಾಯ್ಕ ಉಪಸ್ಥಿತರಿದ್ದರು.