ಡೈಲಿ ವಾರ್ತೆ: 23/JAN/2025
ಬಂಟ್ವಾಳ: ಆರ್.ಟಿ.ಒ. ಮತ್ತು ಸಂಚಾರಿ ಪೋಲೀಸ್ ಠಾಣೆ ವತಿಯಿಂದ ವಿಭಿನ್ನ ಕಾರ್ಯಕ್ರಮ, ಹೆಲ್ಮೆಟ್ ಮೇಳ
ಬಂಟ್ವಾಳ : ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಬಂಟ್ವಾಳ ಆರ್.ಟಿ.ಒ. ಮತ್ತು ಸಂಚಾರಿ ಪೋಲೀಸ್ ಠಾಣೆ ವತಿಯಿಂದ ಹೆಲ್ಮೆಟ್ ಮೇಳ ಎಂಬ ವಿಭಿನ್ನ ಕಾರ್ಯಕ್ರಮ ಗುರುವಾರ ಬಿ.ಸಿ.ರೋಡ್ ಸರ್ಕಲ್ ಬಳಿ ನಡೆಯಿತು.
ಜಂಟಿ ಕಾರ್ಯಚರಣೆ ನಡೆಸಿದ ಎರಡೂ ಇಲಾಖೆಯವರು ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರರಿಗೆ ಸ್ಥಳದಲ್ಲೇ 500 ರೂಪಾಯಿ ದಂಡ ಕಟ್ಟುವಂತೆ ಅಥವಾ ರೂ 500 ತೆತ್ತು ಹೊಸ ಹೆಲ್ಮೆಟ್ ಖರೀದಿಸುವಂತೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಸುಮಾರು 60 ಸವಾರರು ಕಾನೂನು ಪ್ರಕಾರ ರೂ.500. ದಂಡ ಕಟ್ಟಿದರೆ, ಉಳಿದ 200 ಕ್ಕೂ ಅಧಿಕ ಸವಾರರು ಹೆಲ್ಮೆಟ್ ಪಡೆದುಕೊಂಡಿದ್ದಾರೆ. ಇದರ ಜೊತೆ ದ್ವಿಚಕ್ರ ವಾಹನಗಳಲ್ಲಿ ಇಬ್ಬರು ಹೆಲ್ಮೆಟ್ ಧರಿಸಿ ಪ್ರಯಾಣಿಸುವ ಸವಾರ ಹಾಗೂ ಸಹ ಸವಾರರಿಗೆ ಗುಲಾಬಿ ಹೂ ನೀಡಿ ಗೌರವಿಸಲಾಯಿತು.
ರೂಪಾಯಿ 900 ಬೆಲೆ ಬಾಳುವ ಐ.ಎಸ್.ಐ.ಮಾರ್ಕ್ ನ ಉತ್ತಮ ಗುಣ ಮಟ್ಟದ ಹೆಲ್ಮೆಟನ್ನು ಕಂಪೆನಿ ಜೊತೆ ಮಾತನಾಡಿ ದಂಡದ ಹಣಕ್ಕೆ ಹೊಂದಾಣಿಕೆಯಾಗುವಂತೆ ಬೆಲೆ ಕಡಿತಗೊಳಿಸಿ ರೂ.500 ಗೆ ದೊರಕುವಂತೆ ಇಲಾಖೆಯ ವತಿಯಿಂದ ವ್ಯವಸ್ಥೆ ಮಾಡಲಾಗಿತ್ತು.
ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ವಿಭಿನ್ನವಾದ ಯೋಚನೆಯ ಕಾರ್ಯಕ್ರಮ ಸಾರ್ವಜನಿಕ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ಈ ಸಂದರ್ಭದಲ್ಲಿ ಬಂಟ್ವಾಳ ಎ.ಆರ್.ಟಿ.ಒ ಚರಣ್, ನಗರ ಠಾಣಾ ಪೋಲೀಸ್ ನಿರೀಕ್ಷಕ ಆನಂತಪದ್ಮನಾಭ, ಸಂಚಾರಿ ಪೊಲೀಸ್ ಠಾಣಾಧಿಕಾರಿಗಳಾದ ಸುತೇಶ್, ಸಂಜೀವ, ಬ್ರೇಕ್ ಇನ್ಸ್ ಪೆಕ್ಟರ್ ಪ್ರಮೋದ್ ಭಟ್ ಹಾಗೂ ಆರ್.ಟಿ ಒ ಮತ್ತು ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.