ಡೈಲಿ ವಾರ್ತೆ: 24/JAN/2025
ತೆಕ್ಕಟ್ಟೆಯಲ್ಲಿ ಬೀಜಾಡಿ ಮೀನುಗಾರರ ಸಹಕಾರಿ ಸಂಘದ 4ನೇ ಶಾಖೆ ಲೋಕಾರ್ಪಣೆ: ಯಾವುದೇ ವ್ಯಕ್ತಿ ಸತ್ತ ಮೇಲೆ ಅವರ ಸಾಧನೆಯನ್ನು ಗುರುತಿಸುವುದಕ್ಕಿಂತ ಅವರ ಜೀವಂತಿಕೆಯ ಕಾಲದಲ್ಲಿಯೇ ಅವರ ಸಾಧನೆಯನ್ನು ಗುರುತಿಸಿ ಮಾತನಾಡಿ – ಕೆ. ಜಯಪ್ರಕಾಶ್ ಹೆಗ್ಡೆ
ಕೋಟ: ಬೀಜಾಡಿ ಮೀನುಗಾರರ ಸಹಕಾರಿ ಸಂಘದ 4ನೇ ಶಾಖೆ ಉದ್ಘಾಟನೆಯ ಈ ಶುಭ ಸಂದರ್ಭದಲ್ಲಿ ಸಂಘದಿಂದ ಹಿರಿಯ ಮೀನುಗಾರರನ್ನು ಗುರುತಿಸಿ ಗೌರವಿಸಿದ್ದೀರಿ ಅಲ್ಲದೆ ಇದೇ ಸಂಘದ ಸದಸ್ಯರಾಗಿರುವ ಹುತಾತ್ಮ ಯೋಧ ಅನೂಪ್ ಪೂಜಾರಿಯವರನ್ನು ಸ್ಮರಿಸಿ ಅವರ ಕುಟುಂಬಕ್ಕೆ ನೀಡಿದ ಗೌರವ ಮತ್ತು ಸಹಾಯ ಶ್ಲಾಘನೀಯವಾದ್ದದ್ದು.
ಯಾವುದೇ ವ್ಯಕ್ತಿ ಮೃತಪಟ್ಟ ಬಳಿಕ ಅವರ ಸಾಧನೆಯನ್ನು ಗುರುತಿಸಿ ಮಾತುಗಳನ್ನಾಡುವುದಕ್ಕಿಂತ ಅವರ ಜೀವಂತಿಕೆಯ ಕಾಲದಲ್ಲಿಯೇ ಅವರ ಸಾಧನೆಯ ಬಗ್ಗೆ ಗುರುತಿಸಿ ಮಾತನಾಡಿದಾಗ ಮಾತ್ರ ಅವರು ಮಾಡಿದ ಸಾಧನೆಗೊಂದು ಬೆಲೆ ಇರುತ್ತದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ತೆಕ್ಕಟ್ಟೆಯ ಬಸ್ಸು ತಂಗುದಾಣದ ಸಮೀಪ ನಿರೂಪಮಾ ಕಾಂಪ್ಲೆಕ್ಸ್ ನಲ್ಲಿ ಗುರುವಾರ ಬೀಜಾಡಿ ಮೀನುಗಾರರ ಸಹಕಾರಿ ಸಂಘ ನಿಯಮಿತ ಬೀಜಾಡಿ ಇದರ 4ನೇ ಶಾಖೆಯ ಲೋಕಾರ್ಪಣೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಸಾಧನೆ ಮಾಡಿದ ಯಾವುದೇ ವ್ಯಕ್ತಿ ಬದುಕಿರುವಾಗಲೇ ಆ ಊರಿನವರು ಅವರನ್ನು ಗುರುತಿಸುವ ಕೆಲಸ ಮಾಡಿ ಇದರಿಂದ ಬೆಳೆಯುತ್ತಿರುವ ಮಕ್ಕಳ ಮನಸ್ಸಿನಲ್ಲಿ ನಾವು ಏನಾದರೂ ಸಾಧನೆ ಮಾಡಿದರೆ ನಮ್ಮನ್ನು ಸಹ ಗುರುತಿಸಬಹುದು ಎನ್ನುವ ಯೋಚನೆ ಬರುತ್ತದೆ ಎಂದರು.
ಮೀನುಗಾರಿಕೆ ಎನ್ನುವುದು ಯಾವುದೇ ಒಂದು ಜಾತಿಗೆ ಸೀಮಿತವಾಗದೆ ಎಲ್ಲಾ ಜಾತಿಯವರು ಆ ಉದ್ಯೋಗವನ್ನು ಮಾಡುತ್ತಿದ್ದಾರೆ.
ಸಂಘಗಳಲ್ಲಿ ಮಹಿಳೆಯರಿಗೆ ನೀಡುವ ಸಾಲಗಳಿಗೆ ಹತ್ತು ಜನ ಹೊಣೆಗಾರರನ್ನಾಗಿ ಮಾಡುವುದು ತಪ್ಪು, ಒಬ್ಬರು ಪಡೆಯುವ ಸಾಲಕ್ಕೆ ಅವರೇ ಜವಾಬ್ದಾರರಾಗಿರಬೇಕು ಹೊರತು ಹತ್ತು ಜನ ಜವಾದ್ದಾರರನ್ನಾಗಿ ಮಾಡುವ ಕಾನೂನನ್ನು ಮಹಿಳೆಯರು ವಿರೋಧಿಸಬೇಕು ಎಂದರು. ಅಭಿವೃದ್ಧಿ ಎನ್ನುವುದು ನಿಂತ ನೀರಲ್ಲ ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿರುತ್ತದೆ
ಬೀಜಾಡಿ ಮೀನುಗಾರರ ಸಹಕಾರಿ ಸಂಘ ಇನ್ನು ಹೆಚ್ಚಿನ ಸಾಧನೆ ಮಾಡಿ ಇನ್ನಷ್ಟು ಶಾಖೆಯನ್ನು ತೆರೆಯಲಿ ಎಂದು ಶುಭಹಾರೈಸಿದರು.
ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಂಘ ನೂತನ ಕಛೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿ 7 ದಶಕಗಳಿಂದ ಸೇವೆ ನೀಡುತ್ತಿರುವ ಬೀಜಾಡಿ ಮೀನುಗಾರರ ಸಹಕಾರಿ ಸಂಘ ಇದೀಗ ದೊಡ್ದ ದಾಖಲೆಯನ್ನೇ ನಿರ್ಮಿಸಿದೆ. 16 ಸಾವಿರ ಸದಸ್ಯರನ್ನು ಒಳಗೊಂಡು ಪ್ರಸ್ತುತ 56 ಕೋಟಿ ರೂಪಾಯಿ ಠೇವಣಿಯನ್ನು ಸಂಗ್ರಹಿಸಿ ಇದೀಗ 4ನೇ ಶಾಖೆಯನ್ನು ತೆಕ್ಕಟ್ಟೆಯಲ್ಲಿ ತೆರೆದಿರುವುದು ಸಂಘದ ಸಾಧನೆಗೆ ಅತಿ ದೊಡ್ಡ ಸಾಕ್ಷಿಯಾಗಿದೆ.
ಅವಿಭಜಿತ ಜಿಲ್ಲೆಗಳಲ್ಲಿ ಅತಿ ದೊಡ್ಡ ಸಂಘವಾಗಿ ಮೂಡಿಬಂದಿರುವುದರ ಹಿಂದೆ ಅಷ್ಟೇ ದೊಡ್ಡ ಪರಿಶ್ರಮವಿರುತ್ತದೆ. 56 ಕೋಟಿ ಇರುವ ಠೇವಣಿ ಮುಂದಿನ ದಿನದಲ್ಲಿ 100 ಕೋಟಿಗಳಾಗಲಿ ಎಂದರು. ಸುಮಾರು 51 ಕೋಟಿ ರೂಪಾಯಿಗಳಲ್ಲಿ ಮೀನು ಮರಿಗಳನ್ನಿಡುವ ಸಂದರ್ಭದಲ್ಲಿ ಅವುಗಳಿಗೆ ಆಶ್ರಯತಾಣವಾಗಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರಕಾರದ ಕೃತಕ ಬಂಡೆ ಯೋಜನೆಯನ್ನು ಜಾರಿಗೆ ತರಲಾಯಿತು. ಇದರಂತೆ ಗುಜರಾತ್ ಮಾದರಿಯಲ್ಲಿ ಕರ್ನಾಟಕದ ಕರಾವಳಿಯಲ್ಲಿಯೂ ಕೂಡ ಅಭಿವೃದ್ಧಿ ಮಾಡಬೇಕು ಎನ್ನುವ ಯೋಚನೆಗಳಿವೆ. ವ್ಯವಸ್ಥಿತವಾಗಿ ಈ ಯೋಜನೆ ಜಾರಿಗೆ ತರುವುದಕ್ಕಿಂತ ಮೊದಲು ಅಲ್ಲಿನ ಮೀನುಗಾರರ ಅನುಮತಿಯನ್ನು ಪಡೆಯುತ್ತಾರೆ.
ಈ ಕೃತಕ ಬಂಡೆ ನಿರ್ಮಾಣ ದಿಂದಾಗಿ ಮೀನುಗಾರರಿಗೆ ಉತ್ತಮ ಅನುಕೂಲವಾಗುತ್ತದೆ ಎಂದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಗಣಕಯಂತ್ರ ಉದ್ಘಾಟಿಸಿ ಮಾತನಾಡಿ, ಈ ಸಂಸ್ಥೆ ಕಳೆದ 7 ದಶಕಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಠೇವಣಿ ಮತ್ತು ಸಾಲವನ್ನು ಒಂದೇ ಅನುಪಾತದಲ್ಲಿ ನೀಡಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ವಿಶೇಷ ಪುರಸ್ಕರಗಳನ್ನು ಪಡೆದು ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಸಂಘದ ಸದಸ್ಯರಿಗೆ ದೊರಕಿಸಿಕೊಡುವುದಲ್ಲದೇ, ಅವಘಡಗಳು ಸಂಭವಿಸಿದಾಗ ಸದಸ್ಯರಿಗೆ ಹಾಗೂ ಮೀನುಗಾರರಿಗೆ ಕೂಡಲೇ ಸ್ಪಂದಿಸಿ ತುರ್ತು ಪರಿಹಾರವನ್ನು ತರಿಸುವ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಕಾರ್ಯನಿರ್ವಹಿಸಬೇಕು ಎಂದರು.
ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಬಿ.ಮಂಜುನಾಥ ಕುಂದರ್ ಚಾತ್ರಬೆಟ್ಟು ಅಧ್ಯಕ್ಷತೆ ವಹಿಸಿದ್ದರು.
ಮತ್ಸ್ಯೋದ್ಯಮಿ, ಕೋಟ ಗೀತಾನಂದ ಫೌಂಡಶೇನ್ ಪ್ರವರ್ತಕ ಆನಂದ ಸಿ ಕುಂದರ್ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು.
ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಠೇವಣಿ ಪತ್ರ ಹಸ್ತಾಂತರಿಸಿದರು. ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಉದ್ಯಮಿ ಸಂತೋಷ್ ನಾಯಕ್, ಕಟ್ಟಡ ಮಾಲಿಕ ಟಿ.ರಾಮದಾಸ ಪ್ರಭು, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಜಯಂತ್ ಅಮೀನ್ ಕೋಡಿ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಮೇಶ್ ಕಾಂಚನ್, ಉಪಾಧ್ಯಕ್ಷ ರಾಜು ತೋಟದ ಬೆಟ್ಟು, ನಿರ್ದೇಶಕರಾದ ಅಶೋಕ್ ಪೂಜಾರಿ ಬೀಜಾಡಿ, ಬಿ.ಶಿವರಾಮ ಅಮೀನ್ ಬೀಜಾಡಿ, ಬಿ.ಶೇಖರ ಮೊಗವೀರ, ದಿನೇಶ್ ಮೆಂಡನ್, ಅಣ್ಣಯ್ಯ ಪುತ್ರನ್, ಜಾನಕಿ ಬಿಲ್ಲವ, ಅನುಷಾ ಕೊರವಡಿ, ಶ್ರೀನಿವಾಶ ಮರಕಾಲ, ಜ್ಯೋತಿ ಡಿ ಮೆಲ್ಲೋ, ನಾಗೇಶ್ ಬೀಜಾಡಿ, ಸಹ ನಿದರ್ೇಶಕರಾದ ವೆಂಕಟೇಶ್ ಕುಮಾರ್, ಸುನೀಲ್ ಜಿ ನಾಯ್ಕ್ ಉಪಸ್ಥಿತರಿದ್ದರು.
ಈ ಸಂದರ್ಭ ಸಂಘದಿಂದ ಬೀಜಾಡಿಯ ಹುತಾತ್ಮ ಯೋಧ ಅನೂಪ್ ಪೂಜಾರಿಯವರ ಸ್ಮರಣಾರ್ಥ ಹುತಾತ್ಮ ಯೋಧನ ತಾಯಿ ಚಂದು ಪೂಜಾರಿ ಮತ್ತು ಪತ್ನಿ ಮಂಜುಶ್ರೀಗೆ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ತ್ರಿಚಕ್ರ ವಾಹನ ಖರೀದಿಯ ಬಗ್ಗೆ ಇಲಾಖೆಯಿಂದ ಮಂಜೂರಾದ ಸಹಾಯ ಧನದ ಆದೇಶ ಪತ್ರ ಮತ್ತು ಮೀನುಗಾರಿಕಾ ಇಲಾಖೆಯ ವಿವಿಧ ಸವಲತ್ತುಗಳನ್ನು ಸದಸ್ಯರಿಗೆ ವಿತರಿಸಲಾಯಿತು. ಹಿರಿಯ ಮೀನುಗಾರರಿಗೆ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಕಟ್ಟಡ ಮಾಲಿಕ ಟಿ.ರಾಮದಾಸ ಪ್ರಭು, ಸಂಘದ ಅಧ್ಯಕ್ಷ ಬಿ.ಮಂಜುನಾಥ ಕುಂದರ್, ಉಪಾಧ್ಯಕ್ಷ ರಾಜು ತೋಟದಬೆಟ್ಟು, ಮುಖ್ಯಕಾರ್ಯನಿರ್ವಹಣಾಧಿಕಾರಿ ರಮೇಶ್ ಕಾಂಚನ್ ಇವರನ್ನು ಸಂಘದ ವತಿಯಿಂದ ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ರಾಜು ತೋಟದ ಬೆಟ್ಟು ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ರಮೇಶ್ ಕಾಂಚನ್ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು.
ನಿರ್ದೇಶಕ ಅಣ್ಣಯ್ಯ ಪುತ್ರನ್ ವಂದಿಸಿದರು.