ಡೈಲಿ ವಾರ್ತೆ: 24/JAN/2025
ಬೆಂಗಳೂರು| ಮಂತ್ರಿ ಮಾಲ್‌ನ ಎರಡನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು
ಬೆಂಗಳೂರು: ಇಲ್ಲಿನ ಮಾಲ್‌ವೊಂದರ ಎರಡನೇ ಮಹಡಿಯಿಂದ ಹಾರಿ 55 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಮೃತರನ್ನು ನಗರದ ಉಳ್ಳಾಲ ಉಪನಗರ ನಿವಾಸಿ ಟಿಸಿ ಮಂಜುನಾಥ್ ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಮಲ್ಲೇಶ್ವರಂನಲ್ಲಿರುವ ಮಂತ್ರಿ ಮಾಲ್‌ನಲ್ಲಿ ಈ ಘಟನೆ ನಡೆದಿದೆ. ಮೃತರ ಜೇಬಿನಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮಂಜುನಾಥ್ ಹಠಾತ್ತನೆ ರೇಲಿಂಗ್ ಮೇಲೆ ಹತ್ತಿ ಎರಡನೇ ಮಹಡಿಯಿಂದ ಜಿಗಿದಿದ್ದಾರೆ ಎನ್ನಲಾಗಿದೆ. ತಕ್ಷಣವೇ ಅವರನ್ನು ಭದ್ರತಾ ಸಿಬ್ಬಂದಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಾಥಮಿಕ ವಿಚಾರಣೆಯ ಪ್ರಕಾರ, ಮಂಜುನಾಥ್ ಅವರು ಭಾರಿ ಸಾಲ ಮಾಡಿಕೊಂಡಿದ್ದರು ಮತ್ತು ಅವರ ಎಲೆಕ್ಟ್ರಾನಿಕ್ಸ್ ಅಂಗಡಿಯು ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರಣ ಸಾಲವನ್ನು ಹಿಂತಿರುಗಿಸಲು ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.