ಡೈಲಿ ವಾರ್ತೆ: 25/JAN/2025

ಮೀಟರ್ ಬಡ್ಡಿ ದಂಧೆಕೋರರ ಕಿರುಕುಳ – ಯುವಕ ನೇಣಿಗೆ ಶರಣು

ಮಂಡ್ಯ: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳದಿಂದ ಯುವಕನೊಬ್ಬ ನೇಣಿಗೆ ಶರಣಾದ ಘಟನೆ ಕೆ.ಆರ್.ಪೇಟೆಯ ವಳಗೆರೆ ಮೆಣಸ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಲೋಹಿತ್ (35) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಆತ ಖಾಸಗಿ ವ್ಯಕ್ತಿಗಳಿಂದ ಮೀಟರ್ ಬಡ್ಡಿಗೆ ಸಾಲ ಪಡೆದಿದ್ದ. ಸುಮಾರು 30 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಅಲ್ಲದೇ ಲಕ್ಷ ಲಕ್ಷ ಬಡ್ಡಿ ಕೂಡ ಕಟ್ಟಿದ್ದ. ಆದರೂ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ತಪ್ಪಿರಲಿಲ್ಲ.
ಯುವಕ ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಪಡೆದಿರುವ ಬಗ್ಗೆ ಶಂಕೆ ಇದೆ. ಆತ ಮೂರು ದಿನದ ಹಿಂದೆ ಕೆ.ಆರ್.ಪೇಟೆ ಪಟ್ಟಣದ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಮುಂದಾಗಿದ್ದ. ಬಳಿಕ ದೂರು ನೀಡದೆ ಗ್ರಾಮಸ್ಥರ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದು ವಾಪಸ್ಸಾಗಿದ್ದ.

ಇದೀಗ ಮೈಕ್ರೋ ಫೈನಾನ್ಸ್ ಹಾಗೂ ಮೀಟರ್ ಬಡ್ಡಿ ದಂಧೆಕೋರರ ಕಾಟಕ್ಕೆ ಬೇಸತ್ತು ನೇಣಿಗೆ ಶರಣಾಗಿದ್ದಾನೆ. ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.