ಹೊನ್ನಾವರ| ಗರ್ಭದ ಗೋ ಹತ್ಯೆ ಪ್ರಕರಣ : ಪ್ರಮುಖ ಆರೋಪಿ ಸುಳಿವು ನೀಡಿವರಿಗೆ 50 ಸಾವಿರ ಬಹುಮಾನ

ಹೊನ್ನಾವರ: ಗೋ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಉತ್ತರಕನ್ನಡ ಪೊಲೀಸ್ ಕೊನೆಗೂ ಯಶಸ್ವಿಯಾಗಿದ್ದಾರೆ. ಪ್ರಕರಣದ ಆರೋಪಿಗಳಲ್ಲಿ ಒಬ್ಬನ ಕಾಲಿಗೆ ಗುಂಡು ಹಾರಿಸಿದ್ದರೆ, ಇನ್ನೊಬ್ಬನನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಆದರೆ ಪ್ರಮುಖ ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದು ಹುಡುಕಾಟ ಚುರುಕುಗೊಳಿಸಿದ್ದಾರೆ. ಅಲ್ಲದೆ ಈ ಆರೋಪಿಗಳ ಹುಡುಕಿ ಕೊಟ್ಟವರಿಗೆ ಇದೀಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ 50 ಸಾವಿರ ಬಹುಮಾನ ಘೋಷಣೆ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೊಂಡಕುಳಿ ಗ್ರಾಮದಲ್ಲಿ ನಡೆದಿದ್ದ ಗರ್ಭ ಧರಿಸಿದ್ದ ಹಸುವಿನ ಹತ್ಯೆ ಪ್ರಕರಣ ಇಡೀ ರಾಜ್ಯದಲ್ಲಿ ಸದ್ದು ಮಾಡಿತ್ತು. ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆಗಳು ನಡೆದಿದ್ದವು. ಇನ್ನು ಪ್ರಕರಣದ ಹಿಂದೆ ಬಿದ್ದಿದ್ದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಆರೋಪಿಗಳನ್ನು ಗುರುತಿಸುವಲ್ಲಿ ಕೊನೆಗೂ ಯಶಸ್ವಿಯಾಗಿದೆ. ಸ್ಥಳೀಯರು ಹಾಗೂ ಮಫ್ತಿನಲ್ಲಿದ್ದ ಪೊಲೀಸರ ಮಾಹಿತಿ ಆಧಾರದ ಮೇಲೆ ಯಾವುದೇ ಸುಳಿವು ಇಲ್ಲದಿದ್ದರೂ ಪ್ರಕರಣ ಭೇದಿಸಲಾಗಿದೆ.ಕೊಂಡಕುಳಿ ಗ್ರಾಮದಲ್ಲಿ ಮೇಯಲು ಬಿಟ್ಟಿದ್ದ ಹಸುವನ್ನ ಹತ್ಯೆ ಮಾಡಲಾಗಿತ್ತು. ಸುಮಾರು 400ಕ್ಕೂ ಅಧಿಕ ಜನರನ್ನು ಪೊಲೀಸರು ವಿಚಾರಣೆ ನಡೆಸಿ ಕೊನೆಗೂ ಹೊನ್ನಾವರ ತಾಲೂಕಿನ ಮಲ್ಕಿಯ ತೌಫಿಕ್, ಹೊನ್ನಾವರ ತಾಲೂಕಿನ ಕಾಸರಕೋಡ ಫೈಝನ್ ಎನ್ನುವ ಆರೋಪಿಯನ್ನು ಬಂಧಿಸಲಾಗಿದೆ. ಹಸು ಹತ್ಯೆಗೆ ಬಳಸಿದ್ದ ಕತ್ತಿಯನ್ನು ವಶಕ್ಕೆ ಪಡೆಯಲು ಹೋದ ವೇಳೆಯಲ್ಲಿ ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾಗಿದ್ದ ಫೈಝನ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು. ಪ್ರಕರಣದಲ್ಲಿ ಹೊನ್ನಾವರ ತಾಲೂಕಿನ ವಾಸಿಂ ಹಾಗೂ ಮುಜಾಮಿಲ್ ಎನ್ನುವವರು ಪ್ರಮುಖ ಆರೋಪಿಗಳಾಗಿದ್ದು ಇಬ್ಬರು ಪರಾರಿಯಾಗಿದ್ದಾರೆ. ಪೊಲೀಸರು ಈಗಾಗಲೇ ತಪ್ಪಿಸಿಕೊಂಡ ಇಬ್ಬರು ಆರೋಪಿಗಳ ಬಂಧನಕ್ಕೆ ಜಾಡು ಬೀಸಿದ್ದು ಆರೋಪಿಗಳ ಬಗ್ಗೆ ಮಾಹಿತಿ ನೀಡಿದರೆ, ಅಥವಾ ಆರೋಪಿ ಹುಡುಕಿಕೊಟ್ಟಲ್ಲಿ 50 ಸಾವಿರ ಬಹುಮಾನ ಕೊಡುವುದಾಗಿ ಘೋಷಣೆ ಮಾಡಲಾಗಿದೆ. ಪ್ರಕರಣದಲ್ಲಿ ಬೇರೆ ಕೋಮಿನ ಇಬ್ಬರು ಕೂಡ ಸಹಾಯ ಮಾಡಿರುವ ಬಗ್ಗೆ ಆರೋಪ ಕೇಳಿಬಂದಿದ್ದು, ಈ ಕುರಿತು ತನಿಖೆ ಕೈಗೊಂಡಿದ್ದೇವೆ ಎಂದು ಎಸ್​ಪಿ ಎಂ. ನಾರಾಯಣ್ ತಿಳಿಸಿದ್ದಾರೆ.

ಆರೋಪಿಗಳು ಹಸುವನ್ನು ಹತ್ಯೆ ಮಾಡಿ ಮಾಂಸವನ್ನು 7500 ರೂಗೆ ಮಾರಾಟ ಮಾಡಿ, ಹಣವನ್ನು ಯುಪಿಐ ಮೂಲಕ ಪಡೆದಿದ್ದರು. ಹಣ ಪಡೆದಿರುವುದಕ್ಕೆ ದಾಖಲೆ ಲಭ್ಯವಾಗಿದೆ. ಸ್ಥಳೀಯರೊಬ್ಬರು ನೀಡಿದ ಮಾಹಿತಿ ಆಧರಿಸಿ ತನಿಖೆ ಮಾಡಿ, ಪ್ರಕರಣ ಭೇದಿಸಿದ್ದೇವೆ. ಆರು ತಂಡಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ನಾಪತ್ತೆಯಾದವರಿಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಎಸ್​ಪಿ ಮಾಹಿತಿ ನೀಡಿದರು.