ಡೈಲಿ ವಾರ್ತೆ: 27/JAN/2025

ಮೈಕ್ರೋ ಫೈನಾನ್ಸ್ ಸಾಲಕ್ಕೆ ಹೆದರಿ ಮಹಿಳೆ ಆತ್ಮಹತ್ಯೆ!

ಮೈಸೂರು: ವಿಷದ ಮಾತ್ರೆಗಳನ್ನು ನುಂಗಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದಲ್ಲಿ ನಡೆದಿದೆ.

ಜಯಶೀಲಾ (53) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆ ಐಐಎಫ್‌ಎಲ್, ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್‌ನಲ್ಲಿ ಮನೆ, ವ್ಯವಸಾಯ ಹಾಗೂ ಹಸು ಸಾಕಾಣಿಕೆಗಾಗಿ 5 ಲಕ್ಷ ಸಾಲ ಪಡೆದಿದ್ದರು. ಪ್ರತಿ ತಿಂಗಳು 20,000ಕ್ಕೂ ಹೆಚ್ಚು ಇಎಂಐ ಕಟ್ಟಬೇಕಾಗಿತ್ತು. ಸಾಲದಲ್ಲಿ ತೆಗೆದುಕೊಂಡಿದ್ದ ಹಸು ಕೂಡ ಇತ್ತೀಚೆಗೆ ಮೃತಪಟ್ಟಿತ್ತು. ಈ ಹಿನ್ನೆಲೆ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದ್ದರು. ಈ ಹಿನ್ನೆಲೆ ಸಮೀಪದ ಹುಲ್ಲಹಳ್ಳಿಗೆ ತೆರಳಿ ವಿಷದ ಮಾತ್ರೆಗಳನ್ನು ತಂದು ಜಮೀನಿನಲ್ಲಿ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಂತರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಲಿದೆ.