ಡೈಲಿ ವಾರ್ತೆ: 02/ಫೆ /2025
ಉಡುಪಿ| ನಕ್ಸಲ್ ತೊಂಬಟ್ಟು ಲಕ್ಷ್ಮೀ ಇಂದು ಶರಣಾಗತಿ?
ಉಡುಪಿ: ನಕ್ಸಲ್ ಚಟುವಟಿಕೆಯಲ್ಲಿದ್ದು ಬಳಿಕ ಅದನ್ನು ತೊರೆದು ಸಾಂಸಾರಿಕ ಜೀವನ ನಡೆಸುತ್ತಿರುವ ತೊಂಬಟ್ಟು ಲಕ್ಷ್ಮೀ ಇಂದು ಉಡುಪಿ ಅಥವಾ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗುವ ಮೂಲಕ ಕರ್ನಾಟಕದಲ್ಲಿ ಮುಖ್ಯ ವಾಹಿನಿಗೆ ಬರಲಿದ್ದಾಳೆ ಎಂದು ತಿಳಿದುಬಂದಿದೆ.
ಕುಂದಾಪುರ ತಾಲೂಕಿನ ಮಚ್ಚಟ್ಟು ತೊಂಬಟ್ಟು ಗ್ರಾಮದ ನಕ್ಸಲ್ ಮಹಿಳೆ ಲಕ್ಷ್ಮೀ ಮೇಲೆ ಶಂಕರನಾರಾಯಣ/ಅಮಾಸೆಬೈಲ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳಿವೆ. ಇದನ್ನು ಹೊರತುಪಡಿಸಿ ಬೇರೆಲ್ಲೂ ಇವಳ ಮೇಲೆ ಪ್ರಕರಣ ಇಲ್ಲ ಎಂದು ತಿಳಿದು ಬಂದಿದೆ.
ಲಕ್ಷ್ಮೀ ಪ್ರಸ್ತುತ ಆಂಧ್ರ ಪ್ರದೇಶದಲ್ಲಿ ಗಂಡನ ಜತೆ ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾಳೆ. ಗಂಡ ಕೂಡ ನಕ್ಸಲ್ ಆಗಿದ್ದು, ಮುಖ್ಯವಾಹಿನಿಗೆ ಬಂದಿದ್ದರು ಎಂಬ ಮಾಹಿತಿಯೂ ಇದೆ.
ಲಕ್ಷ್ಮೀ ಸುಮಾರು 15 ವರ್ಷಗಳಿಂದ ಕುಟುಂಬದವರಿಂದ ಸಂಪರ್ಕ ಕಳೆದುಕೊಂಡಿದ್ದಾಳೆ. ಭೂಗತವಾಗಿ ನಕ್ಸಲ್ ಚಟುವಟಿಕೆಯಲ್ಲಿ ಇದ್ದಳು ಎಂಬ ಮಾಹಿತಿಯಿದೆ. ಆದರೆ ಮಂಡಗಾರು ಲತಾ, ವಿಕ್ರಂ ಗೌಡ ತಂಡದ ರೀತಿಯಲ್ಲಿ ಹಾರ್ಡ್‌ಕೋರ್ ನಕ್ಸಲ್ ಆಗಿ ಲಕ್ಷ್ಮೀ ಹೆಸರು ಕೇಳಿ ಬಂದಿರಲಿಲ್ಲ. ಆಕೆ ಭೂಗತವಾಗಿದ್ದಳು ಎಂಬ ಮಾಹಿತಿ ಹೊರತುಪಡಿಸಿ ಹೆಚ್ಚಿನ ಯಾವುದೇ ಮಾಹಿತಿಯೂ ಲಭ್ಯವಿಲ್ಲ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಲಕ್ಷ್ಮೀ ಫೆ. 2ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗತಿಯಾಗಲಿದ್ದಾಳೆ ಎಂದು ಎಎಸ್‌ಪಿ ತಿಳಿಸಿದ್ದಾರೆ.