ಡೈಲಿ ವಾರ್ತೆ: 02/ಫೆ /2025
‘ಶುಭವಾಗಲಿ’ ಬರೆಯಲು ಪರದಾಡಿದ ಕನ್ನಡ ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ
ಕೊಪ್ಪಳ: ಶಿಕ್ಷಣ ಸಚಿವರಿಗೆ ಕನ್ನಡ ಬರೋಲ್ಲ ಎಂದು ಕನ್ನಡಿಗರು ಟೀಕಿಸುತ್ತಿದ್ದರು. ಆದರೆ ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೂ ಸಹ ಕನ್ನಡ ಬರೆಯಲು ಬರೋದಿಲ್ಲ ಎಂಬುದು ಬಯಲಾಗಿದೆ.
ಕೊಪ್ಪಳ ಜಿಲ್ಲೆಯ ಕಾರಟಗಿ ಜೆಪಿ ನಗರದ ಅಂಗನವಾಡಿ ಕೇಂದ್ರ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಶಿವರಾಜ ತಂಗಡಗಿ ಅಂಗನವಾಡಿ ಮಕ್ಕಳಿಗೆ ‘ಶುಭವಾಗಲಿ’ ಎಂದು ಬರೆಯಲು ಮುಂದಾಗಿದ್ದಾರೆ. ಆದರೆ ಏನು ಬರೆಯಬೇಕು ತೋಚದೇ ಲಾಸ್ಟ್ ಬೆಂಚ್ ಸ್ಟೂಡೆಂಟ್ ರೀತಿ ತಂಗಡಗಿ ಪರದಾಡಿದ್ದಾರೆ. ಆಗ ಹಿಂದೆ ನಿಂತ ಬೆಂಬಲಿಗರು ಹೇಗೆ ಬರೆಯಬೇಕು ಎಂದು ಹೇಳಿದ ಬಳಿಕ ಕೊನೆಗೂ ‘ಶುಭವಾಗಲಿ’ ಎಂದು ಬರೆದಿದ್ದಾರೆ.
ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಅತ್ತ ಶಿಕ್ಷಣ ಸಚಿವರಿಗೆ ಕನ್ನಡ ಬರೋಲ್ಲ, ಇತ್ತ ಕನ್ನಡ ಸಂಸ್ಕೃತಿ ಇಲಾಖೆ ಸಚಿವರಿಗೇ ಕನ್ನಡ ಬರೆಯೋದಕ್ಕೆ ಬರೋದಿಲ್ಲ ಇಂಥವರಿಂದಲೇ ನಮ್ಮ ಕನ್ನಡ ಈ ಸ್ಥಿತಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.