ಡೈಲಿ ವಾರ್ತೆ: 04/ಫೆ /2025
ರಾಜಕಾರಣಕ್ಕಾಗಿ ರಾಷ್ಟ್ರೀಯ ಹಿತಾಸಕ್ತಿ ಬಲಿ ಕೊಡುವುದನ್ನು ದೇಶ ಒಪ್ಪುವುದಿಲ್ಲ: ರಾಹುಲ್ ಕುಟುಕಿದ ಪ್ರಧಾನಿ ಮೋದಿ!
ಹೊಸದಿಲ್ಲಿ: ಭಾರತದ ಅಭಿವೃದ್ಧಿಯ ನಾಗಾಲೋಟವನ್ನು ತಡೆಯುವ ಕೀಳು ರಾಜಕಾರಣ, ವಿಕಸಿತ ಭಾರತದ ಪರಿಕಲ್ಪನೆಗೆ ವಿರುದ್ಧವಾದುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ವಿಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ರಾಷ್ಟ್ರೀಯ ಹಿತಾಸಕ್ತಿಯನ್ನೂ ಬಲಿಕೊಡಲು ಸಿದ್ಧವಿರುವುದು ವಿಷಾದನೀಯ..” ಎಂದು ಗುಡುಗಿದರು. ಈ ಮೂಲಕ ಭಾರತದ ಭೂಪ್ರದೇಶದ ಮೇಲೆ ಚೀನಾ ಅತಿಕ್ರಮಣದ ಆರೋಪ ಮಾಡಿದ್ದ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮೋದಿ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.
‘ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಳ್ಳಲು ದೇಶದ ಜನತೆ ನನಗೆ 14ನೇ ಬಾರಿ ಅವಕಾಶ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ನಾನು ದೇಶದ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ..” ಎಂದು ಪ್ರಧಾನಿ ಮೋದಿ ಹೇಳಿದರು.
“ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಭಾರತವು ಭವಿಷ್ಯದ 25 ವರ್ಷಗಳಲ್ಲಿ ಸಾಗಬೇಕಾದ ದಾರಿಯನ್ನು ತೋರಿಸಿಕೊಟ್ಟಿದ್ದಾರೆ. ವಿಕಸತಿ ಭಾರತದ ಉದ್ದೇಶದೊಂದಿಗೆ ನಾವು ಹೆಜ್ಜೆ ಹಾಕಬೇಕು ಎಂದು ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ನಮಗೆ ಮಾರ್ಗದರ್ಶನ ಮಾಡಿದ್ದಾರೆ..” ಎಂದು ಪ್ರಧಾನಿ ಮೋದಿ ಹೇಳಿದರು.
“ದೇಶದ ಬಡ ಜನರಿಗೆ ಮನೆ ಕಟ್ಟಿಕೊಡುವ ನಮ್ಮ ಉದ್ದೇಶವನ್ನು ಹಲವರು ಅಣಕಿಸುತ್ತಿದ್ದಾರೆ. ಆದರೆ ಪಕ್ಕಾ ಮನೆ, ಶೌಚಾಲಯ, ವಿದ್ಯುತ್ ಹೊಂದುವ ಬಡಜನರ ಕನಸಿನ ಮಹತ್ವ ಅರಮನೆಯಂತಹ ಮನೆಗಳಲ್ಲಿ ವಾಸಿಸುವ ಜನರಿಗೆ ತಿಳಿಯುವುದಿಲ್ಲ..” ಎಂದು ಪ್ರಧಾನಿ ಮೋದಿ ಇದೇ ವೇಳೆ ವಿಪಕ್ಷ ನಾಯಕರನ್ನು ತಿವಿದರು.
ಬಡವರ ಮನೆ ಮುಂದೆ ಫೋಟೋ ಸೆಷನ್ ಮಾಡುವ ನಾಯಕರಿಗೆ, ಸದನದಲ್ಲಿ ನಡಯುವ ಬಡವರ ಬಗೆಗಿನ ಚರ್ಚೆ ಬೇಸರ ತರಿಸುತ್ತದೆ. ನಾವು ಸಮಸ್ಯೆಯ ಸಮಾಧಾನಕ್ಕಾಗಿ ನಿರಂತರವಾಗಿ ಪ್ರಯತ್ನ ಮಾಡುತ್ತೇವೆ. ಆದರೆ ಕೆಲವರು ಇದನ್ನು ಅಪಹಾಸ್ಯ ಮಾಡುತ್ತಾ ದೇಶದ ಜನರ ಭಾವನೆಗೆ ಧಕ್ಕೆ ತರುತ್ತಾರೆ..” ಎಂದು ಪ್ರಧಾನಿ ಮೋದಿ ವಿಪಕ್ಷ ನಾಯಕರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.
“ನೇರ ಹಣ ವರ್ಗಾವಣೆ ಮೂಲಕ ನಾವು ರೈತರ ಬ್ಯಾಂಕ್ ಅಕೌಂಟ್‌ಗೆ 40 ಸಾವಿರ ಕೋಟಿ ರೂಪಾಯಿ ವರ್ಗಾಯಿಸಲಾಗಿದೆ. ದೇಶದ ರೈತರ ಹಿತಾಸಕ್ತಿಯನ್ನು ಕಾಪಾಡುವ ವಾಗ್ದಾನ ಮಾಡುತ್ತಿದ್ದ ಹಿಂದಿನ ಸರ್ಕಾರಗಳಿಗೂ, ರೈತರ ಹಿತಾಸಕ್ತಿ ಕಾಪಾಡಲು ನಿರ್ಣಯ ಕೈಗೊಳ್ಳುವ ನಮ್ಮ ಸರ್ಕಾರಕ್ಕೂ ಇರುವ ಮುಖ್ಯ ವ್ಯತ್ಯಾಸ ಎಲ್ಲರ ಕಣ್ಣ ಮುಂದಿದೆ..” ಎಂದು ಪ್ರಧಾನಿ ಮೋದಿ ಸೂಚ್ಯವಾಗಿ ಹೇಳಿದರು.