


ಡೈಲಿ ವಾರ್ತೆ: 07/ಫೆ. /2025


ಕಾಪು ಮೂಲದ ಯುವಕ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತ್ಯು

ಉಡುಪಿ: ಸೌದಿಅರೇಬಿಯಾದಲ್ಲಿ ಉಡುಪಿ ಜಿಲ್ಲೆಯ ಕಾಪು ಮೂಲದ ಯುವಕ ಫೆ. 5 ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತರನ್ನು ಮೊಹಮ್ಮದ್ ಇರ್ಫಾನ್ (37) ಎಂದು ಗುರುತಿಸಲಾಗಿದೆ.
ಇವರು ಸೌದಿಅರೇಬಿಯಾದ ಜಿದ್ದಾದಲ್ಲಿ ಹರಾಜ್ ಸಯ್ಯಾರ್ (ವಾಹನ ಹರಾಜ್ ಯಾರ್ಡ್) ಬಳಿಯ ಯಾಂತ್ರಿಕ ಕಾರ್ಯಗಾರವೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಕೆಲಸ ಮುಗಿಸಿ ಬಂದು ರಾತ್ರಿ ರೂಮ್ ನಲ್ಲಿ ಮಲಗಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸೌದಿಯಲ್ಲಿ ಇರುವ ಸ್ಥಳೀಯ ಅನಿವಾಸಿ ಭಾರತೀಯರು ಹಾಗೂ ಅವರ ಕುಟುಂಬಸ್ಥರು ದೃಢಪಡಿಸಿದ್ದಾರೆ.
ಈತನಿಗೆ 4 ತಿಂಗಳ ಮಗು ಇದ್ದು ಮಧ್ಯರಾತ್ರಿ ಪತ್ನಿಗೆ ವಿಡಿಯೋ ಕಾಲ್ ಮಾಡಿ ಮಗಳನ್ನ ತೋರಿಸಲು ಹೇಳಿ ಮಗಳ ಮುಖವನ್ನು ನೋಡಿ ಮಲಗಿದ್ದರು.
ಈ ಯುವಕ ಹಠಾತ್ ಸಾವಿಗೀಡಾಗಿದ್ದರಿಂದ ಆತನ ಕುಟುಂಬ ಆಘಾತಕ್ಕೊಳಗಾಗಿದೆ.
ಮೃತರು ಹೆಂಡತಿ, ಮಗಳು ಹಾಗೂ ತಂದೆ,ತಾಯಿ ಮತ್ತು ಮೂವರು ಸಹೋದರರು, ಬಂಧು ಬಳಗ ಅಗಲಿದ್ದಾರೆ.