ಡೈಲಿ ವಾರ್ತೆ: 09/ಫೆ. /2025

ಬೆಂ-ಮೈ ಎಕ್ಸ್‌ಪ್ರೆಸ್‌ವೇನಲ್ಲಿ ಹೊತ್ತಿ ಉರಿದ ಬಸ್‌ – ಪ್ರಯಾಣಿಕರು ಪಾರು!

ಮಂಡ್ಯ: ಚಲಿಸುತ್ತಿದ್ದ ಬಸ್‌ನ ಟೈಯರ್‌ ಬ್ಲಾಸ್ಟ್‌ ಆಗಿ ಖಾಸಗಿ ಬಸ್‌ವೊಂದು ಧಗ ಧಗನೆ ಹೊತ್ತಿ ಉರಿದ ಘಟನೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ನಡೆದಿದೆ.

ಮಂಡ್ಯದ ಸ್ಯಾಂಜೋ ಆಸ್ಪತ್ರೆ ಸಮೀಪ ಘಟನೆ ನಡೆದಿದ್ದು, 18 ಮಂದಿ ಪ್ರಯಾಣಿಕರು ಗ್ರೇಟ್‌ ಎಸ್ಕೇಪ್‌ ಆಗಿದ್ದಾರೆ. ಅಶೋಕ್ ಅಂಡ್ ಲಾಜೆಸ್ಟಿಕ್ ಟ್ರಾವೆಲ್ಸ್‌ಗೆ ಸೇರಿದ KA01 AL 5736 ಸಂಖ್ಯೆಯ ಬಸ್‌ ಬೆಂಗಳೂರಿನಿಂದ ಕಣ್ಣೂರಿಗೆ ತೆರಳುತ್ತಿದ್ದ ವೇಳೆ ಟೈಯರ್‌ ಬ್ಲಾಸ್ಟ್‌ ಆಗಿ ದುರಂತ ಸಂಭವಿಸಿದೆ.

ಟೈಯರ್‌ ಬ್ಲಾಸ್ಟ್‌ ಆಗ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಎಚ್ಚೆತ್ತ ಚಾಲಕ ಕೂಡಲೇ ಬಸ್‌ ನಿಲ್ಲಿಸಿ ಪ್ರಯಾಣಿಕರನ್ನ ಕೆಳಗಿಳಿಸಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಬಸ್‌ ವ್ಯಾಪಿಸಿದೆ.
ವಿಚಾರ ತಿಳಿಯುತ್ತಿದ್ದಂತೆ ಮಂಡ್ಯ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಡಿಎಸ್‌ಪಿ ರಾಘವೇಂದ್ರ ನೇತೃತ್ವದಲ್ಲಿ ಬೆಂಕಿ ನಂದಿಸಲಾಯಿತು. ಆದ್ರೆ ಅಗ್ನಿಶಾಮಕ ತಂಡ ಬೆಂಕಿ ನಂದಿಸುವಷ್ಟರಲ್ಲಿ ಬಸ್‌ ಬಹುತೇಕ ಸುಟ್ಟು ಕರಕಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಬಳಿಕ ಟ್ರಾವೆಲ್ಸ್ ಸಂಸ್ಥೆ ಪ್ರಯಾಣಿಕರಿಗೆ ಬೇರೆ ಬಸ್ ವ್ಯವಸ್ಥೆ ಮಾಡಿ ಕಳುಹಿಸಿದೆ. ಮಂಡ್ಯದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.