ಡೈಲಿ ವಾರ್ತೆ: 09/ಫೆ. /2025

ಬಸ್ ಚಾಲಕನಿಗೆ ಮೂರ್ಛೆ ಬಂದು ಮರಕ್ಕೆ ಬಸ್ ಡಿಕ್ಕಿ: ಐವರಿಗೆ ಗಂಭೀರ ಗಾಯ, 40 ಮಂದಿ ಪಾರು

ಚಾಮರಾಜನಗರ: ಚಾಲಕ ಮೂರ್ಛೆ ಬಿದ್ದು ನಿಯಂತ್ರಣ ತಪ್ಪಿದ KSRTC ಬಸ್​ ಮರಕ್ಕೆ ಡಿಕ್ಕಿ ಹೊಡೆದು ಪ್ರಯಾಣಿಕರು ಗಾಯಗೊಂಡ ಘಟನೆ ಹನೂರು ತಾಲೂಕಿನ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ಸಮೀಪ ಇಂದು ನಡೆಯಿತು.

ಹನೂರು ತಾಲೂಕಿನ ಒಡೆಯರಪಾಳ್ಯ ಗ್ರಾಮದಿಂದ ಮೈಸೂರಿಗೆ ತೆರಳುತ್ತಿದ್ದ ಬಸ್​​ ಇದಾಗಿದ್ದು, ಚಾಲಕನಿಗೆ ದಿಢೀರ್ ಮೂರ್ಛೆ ರೋಗ ಕಾಣಿಸಿಕೊಂಡಿದೆ. ಪರಿಣಾಮ, ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಬಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಮುಂಭಾಗದಲ್ಲಿ ಕುಳಿತಿದ್ದ ಐವರು ಗಾಯಗೊಂಡಿದ್ದಾರೆ.

“ಅದೃಷ್ಟವಶಾತ್​​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್​ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಯದೇ ಹೋಗಿದ್ದರೆ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಎಡಭಾಗಕ್ಕೆ ಪಲ್ಟಿಯಾಗಿ ಅಪಾರ ಪ್ರಮಾಣದ ಸಾವುನೋವು ಆಗುತ್ತಿತ್ತು” ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

“ಪ್ರತಿದಿನ ಶಾಲಾ, ಕಾಲೇಜು ವಿದ್ಯಾರ್ಥಿಗಳು ಕೊಳ್ಳೇಗಾಲ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ತೆರಳುತ್ತಾರೆ. ಇಂದು ಭಾನುವಾರ ರಜೆ ಇದ್ದುದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ” ಎಂದು ಸ್ಥಳೀಯರು ಹೇಳಿದ್ದಾರೆ.