ಡೈಲಿ ವಾರ್ತೆ: 11/ಫೆ. /2025

ನಡುರಸ್ತೆಯಲ್ಲೇ ಹೊತ್ತಿ ಉರಿದ ಅಂಬುಲೆನ್ಸ್‌ – ನಾಲ್ವರು ಪಾರು!

ರಾಯಚೂರು: ನಗರದ ಹೊರವಲಯದ ಆಶಾಪುರ ರಸ್ತೆಯಲ್ಲಿ ಚಲಿಸುತ್ತಿದ್ದ ಅಂಬುಲೆನ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಡುರಸ್ತೆಯಲ್ಲೇ ಅಂಬುಲೆನ್ಸ್ ಹೊತ್ತಿ ಉರಿದಿದೆ.

ಮೃತದೇಹವನ್ನ ಸಾಗಿಸುತ್ತಿದ್ದ ಖಾಸಗಿ ಆಸ್ಪತ್ರೆಯ ಅಂಬುಲೆನ್ಸ್‌ನ ಇಂಜಿನ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿದೆ. ಅಂಬುಲೆನ್ಸ್‌ನಲ್ಲಿದ್ದ ಮೂವರು ಹಾಗೂ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಯಚೂರಿನಿಂದ ಉಡಮಗಲ್ ಗ್ರಾಮಕ್ಕೆ ಹೊರಟಿದ್ದ ಅಂಬುಲೆನ್ಸ್‌ನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು, ದಟ್ಟ ಹೊಗೆಯೊಂದಿಗೆ ಹೊತ್ತಿ ಉರಿದಿದೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬಳಿಕ ಕುಟುಂಬಸ್ಥರು ಮೃತದೇಹವನ್ನು ಬೇರೆ ವಾಹನದಲ್ಲಿ ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.