ಡೈಲಿ ವಾರ್ತೆ: 12/ಫೆ. /2025

ಸಾಲಿಗ್ರಾಮ| ಅನಧಿಕೃತ ಪ್ರಾಣಿಪಾಲನ ಕೇಂದ್ರಕ್ಕೆ ಅಧಿಕಾರಿಗಳ ದಾಳಿ – ಪ್ರಾಣಿ, ಪಕ್ಷಿಗಳನ್ನು ಸುರಕ್ಷಿತ ಸ್ಥಳಕ್ಕೆ
ಸ್ಥಳಾಂತರ

ಕೋಟ|ಸಾಲಿಗ್ರಾಮ ದೇಗುಲದ ಬಳಿ ಅನಧಿಕೃತ ಪ್ರಾಣಿ, ಪಕ್ಷಿಗಳ ಪಾಲನ ಕೇಂದ್ರ ಕಾರ್‍ಯನಿರ್ವಹಿಸುತ್ತಿದೆ ಎಂದು ಫೇಟಾ ಸಂಸ್ಥೆ ದೂರಿನನ್ವಯ ಜಿಲ್ಲಾಡಳಿತದ ಸೂಚನೆಯಂತೆ
ಫೆ. 12ರಂದು ಬುಧವಾರ ಬೆಳಿಗ್ಗೆ ಪ್ರಾಣಿಪಕ್ಷಿ ಪಾಲನ ಕೇಂದ್ರದ ವಿರುದ್ಧ ಕ್ರಮಕೈಗೊಳ್ಳಲಾಯಿತು.
ಸೆಂಟರ್‌ನ ಮಾಲೀಕರ ಸಾಕಷ್ಟು ಪ್ರತಿರೋಧದ ನಡುವೆ ಪೊಲೀಸ್ ಉಪಸ್ಥಿತಿಯಲ್ಲಿ ಪ್ರಾಣಿಗಳನ್ನು ಸುರಕ್ಷಿತ ಸ್ಥಳಕ್ಕೆ
ಸ್ಥಳಾಂತರ ಕೂಡ ನಡೆಸಲಾಯಿತು.

ಫೇಟಾ ದೂರಿನ ಮೇರೆಗೆ ಇಲ್ಲಿನ ಪ್ರಾಣಿಗಳು, ವನ್ಯ ಜೀವಿಯಡಿ ಬರುವ ಪಕ್ಷಿಗಳನ್ನು ತೆರವುಗೊಳಿಸಿ ಇಲ್ಲಿನ ಪ್ರಾಣಿ, ಪಕ್ಷಿಗಳನ್ನು ಸುರಕ್ಷಿತ ಸ್ಥಳಕ್ಕೆ
ಸ್ಥಳಾಂತರಿಸಬೇಕು ಎಂದು ಈ ಹಿಂದೆ ಜಿಲ್ಲಾಡಳಿತ ನೇತೃತ್ವದ ಪ್ರಾಣಿದಯಾ ಸಂಘ ಸೂಚನೆಯಂತೆ ನೋಟೀಸು ನೀಡಲಾಗಿತ್ತು. ಆದರೂ ಕೂಡ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳಾಂತರ ನಡೆಸಲಾಗಿದೆ.
ಬುಧವಾರ ಬೆಳಗ್ಗೆ ಪಶುಸಂಗೋಪನಾ ಇಲಾಖೆ ಪ್ರಮುಖರು ಹಾಗೂ ಪೊಲೀಸರು,ಪಟ್ಟಣ ಪಂಚಾಯತ್ ಅಧಿಕಾರಿಗಳೊಂದಿಗೆ ಫೇಟಾ ಸಂಸ್ಥೆ ಮುಖ್ಯಸ್ಥರಾದ ಮೀತ್ ಅಶರ್, ಸಿಂಚನಾ ಸುಬ್ರಹ್ಮಣ್ಯ ಮತ್ತು ಸ್ವಯಂ ಸೇವಕರ ತಂಡ ಡೆಲ್ಲಿ ಮುಂತಾದ ಕಡೆಗಳಿಂದ ಜಿಲ್ಲೆಗೆ ಕಾರ್‍ಯಚರಣೆಗಾಗಿ ಆಗಮಿಸಿದ್ದರು.

ಅಧಿಕಾರಿಗಳ ಸಮ್ಮುಖದಲ್ಲಿ ಜಾನುವಾರುಗಳು ಹಾಗೂ ಮನೆಯ ಒಂದೆರಡು ನಾಯಿ ಹೊರತುಪಡಿಸಿ ಮಿಕ್ಕುಳಿದ ನಾಯಿ, ಬೆಕ್ಕು, ಗಿಳಿಗಳು, ಬಾತುಕೋಳಿ ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು, ಪ್ರಾಣಿಗಳನ್ನು ವಶಕ್ಕೆ ಪಡೆದರು. ಪಶುಸಂಗೋಪನಾ ಇಲಾಖೆ, ಅರಣ್ಯ ಇಲಾಖೆ ಮೂಲಕ ಇದನ್ನು ಪಿಲಿಕಲ ನಿಸರ್ಗಧಾಮ ಹಾಗೂ ಅಧಿಕೃತ ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ ಹಸ್ತಾಂತರಿಸಿ, ಅನಾರೋಗ್ಯದಿಂದ ಬಳಲುತ್ತಿರುವ ಪ್ರಾಣಿಗಳಿಗೆ ಚಿಕಿತ್ಸೆ ನೀಡುವುದಾಗಿ ತಿಳಿಸಿದರು.

ತೀವೃ ಪ್ರತಿರೋಧ:
ಕಾರ್‍ಯಚರಣೆಯ ಸಂದರ್ಭ ಸುಧೀಂದ್ರ ಐತಾಳ ಹಾಗೂ ಅವರ ಪತ್ನಿ ಮತ್ತು ಪುತ್ರ ತೀವೃ ಪ್ರತಿರೋಧ ವ್ಯಕ್ತಪಡಿಸಿದರು. ಅನಂತರ ಪೊಲೀಸರು ಮಧ್ಯ ಪ್ರವೇಶಿಸಿ ಕಾರ್‍ಯಚರಣೆಗೆ ಸಹಕಾರ ನೀಡುವಂತೆ ಕೋರಿದ ಮೇರೆಗೆ
ಸುಮ್ಮನಾದರು.

ಕಾರ್‍ಯಚರಣೆಗೆ ಮುನ್ನ ಸರಿಯಾದ ನೋಟೀಸು ಜಾರಿ ಮಾಡಿಲ್ಲ. ಹಾಗೂ ಕಾಯ್ದೆಯನ್ನು ಪಾಲನೆ ಮಾಡಿಲ್ಲ. ಆದ್ದರಿಂದ ಈ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ಮಾನವ ಹಕ್ಕು ಪ್ರತಿಷ್ಠಾನದ ಪ್ರಧಾನ ಕಾರ್‍ಯದರ್ಶಿ ದಿನೇಶ್ ಗಾಣಿಗ ಕೋಟ ತಿಳಿಸಿದರು.

ಕೋಟ ಠಾಣಾಧಿಕಾರಿ ರಾಘವೇಂದ್ರ ಪಿ., ಕ್ರೈಂ ವಿಭಾಗದ ಪಿ.ಎಸ್.ಐ. ಸುಧಾಪ್ರಭು, ಎ ಎಸ್ಐ ಜಯಪ್ರಕಾಶ್,
ಎ.ಎಸ್ಐ. ಗೋಪಾಲ ಪೂಜಾರಿ ಹಾಗೂ ಸಿಬಂದಿಗಳು, ಪಶುಪಾಲನೆ ಇಲಾಖೆಯ ಮುಖ್ಯ ಪಶುವೈದ್ಯ
ಡಾ| ಪ್ರದೀಪ್, ಡಾ.ಸೂರಜ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಆರೋಗ್ಯ ವಿಭಾಗದ ಮಮತಾ, ಕಂದಾಯ
ನಿರೀಕ್ಷಕ ದೀಪಕ್, ಅರಣ್ಯ ಇಲಾಖೆಯ ಮಾಲ್ತೇಶ್ ಇದ್ದರು.