

ಡೈಲಿ ವಾರ್ತೆ: 13/ಫೆ. /2025


ಪದ್ಮಶ್ರೀ ಪುರಸ್ಕೃತೆ, ಜನಪದ ಗಾನ ಕೋಗಿಲೆ ಸುಕ್ರಿ ಬೊಮ್ಮಗೌಡ ವಿಧಿವಶ

ಕಾರವಾರ: ಪದ್ಮಶ್ರೀ ಮತ್ತು ನಾಡೋಜಾ ಪುರಸ್ಕೃತೆ, ಜನಪದ ಗಾನ ಕೋಗಿಲೆ ಸುಕ್ರಿ ಬೊಮ್ಮಗೌಡ (91) ನಿಧನರಾಗಿದ್ದಾರೆ.
ಜನಪದ ಕೋಗಿಲೆ ಎಂದೇ ಹೆಸರು ಮಾಡಿರುವ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬಡಿಗೇರಿಯ ಸುಕ್ರಿ ಬೊಮ್ಮಗೌಡ ವಯೋಸಹಜ ಕಾಯಿಲೆಯಿಂದಾಗಿ ಇಂದು ಸ್ವಗೃಹದಲ್ಲಿ ದೈವಾಧೀನರಾಗಿದ್ದಾರೆ.
ಹಾಲಕ್ಕಿ ಬುಡಕಟ್ಟು ಜನಾಂಗದಲ್ಲಿ ಹುಟ್ಟಿದ ಇವರು ವಿದ್ಯಭ್ಯಾಸ ಮಾಡದಿದ್ದರೂ ಹಾಲಕ್ಕಿ ಜನಾಂಗದ ಜನಪದ ಹಾಡುಗಳನ್ನು ಹಾಡುವ ಮೂಲಕ ಹಳ್ಳಿ ಸೊಗಡನ್ನ ದಿಲ್ಲಿಗೆ ಕೊಂಡೊಯ್ದ ಕೀರ್ತಿ ಹೊಂದಿದ್ದಾರೆ. ಇದಲ್ಲದೇ ಮದ್ಯ ಮುಕ್ತ ಗ್ರಾಮ ಮಾಡುವ ಹೋರಾಟದಲ್ಲಿ ಭಾಗಿಯಾದ ಇವರು ತಮ್ಮ ಊರನ್ನು ಮದ್ಯ ಮುಕ್ತ ಗ್ರಾಮವನ್ನಾಗಿಸಿದರು. 2017 ರಲ್ಲಿ ಇವರ ಜನಪದ ಹಾಡಿನ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ.
ರಾಜ್ಯ, ರಾಷ್ಟ್ರ ಮಟ್ಟದ ಹಲವು ಪ್ರಶಸ್ತಿ ಪಡೆದಿದ್ದ ಇವರು ಇತ್ತೀಚೆಗೆ ಅನಾರೋಗ್ಯ ಕಾರಣದಿಂದ ಹಾಸಿಗೆ ಹಿಡಿದಿದ್ದರು. ತೀವ್ರ ಉಸಿರಾಟ ಸಮಸ್ಯೆ ಹೊಂದಿದ್ದ ಇವರು ಕೆಲವು ದಿನದ ಹಿಂದೆ ಉಡುಪಿಯಲ್ಲಿ ಚಿಕಿತ್ಸೆ ಪಡೆದು ಮರಳಿ ಬಂದಿದ್ದರು. ಆದರೆ, ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ಇಬ್ಬರು ಮೊಮ್ಮೊಕ್ಕಳು, ಓರ್ವ ಸೊಸೆಯನ್ನು ಅಗಲಿದ್ದಾರೆ. ಇಂದು ಬಡಿಗೇರಿಯಲ್ಲಿ ಇವರ ಅಂತ್ಯಸಂಸ್ಕಾರ ನೆರವೇರಲಿದೆ.