ಡೈಲಿ ವಾರ್ತೆ: 15/ಫೆ. /2025

ಬಂಟ್ವಾಳ | ಆಟೋ ರಿಕ್ಷಾ ಪಲ್ಟಿ – ಚಾಲಕ ಸ್ಥಳದಲ್ಲೇ ಮೃತ್ಯು

ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿದ ರಿಕ್ಷಾ ವೊಂದು ರಸ್ತೆ ಬದಿಯ ಚರಂಡಿಗೆ ಬಿದ್ದು ಚಾಲಕ ಸ್ಥಳದಲ್ಲಿಯೇ ಮೃತಪಟ್ಟರೆ ಪ್ರಯಾಣಿಕ ಮೂವರು ಮಕ್ಕಳಿಗೆ ಗಾಯವಾಗಿರುವ ಘಟನೆ ಅಮ್ಮುಂಜೆಯಲ್ಲಿ ಶುಕ್ರವಾರ ಮಧ್ಯ ರಾತ್ರಿ ವೇಳೆ ನಡೆದಿದೆ.

ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಗಾಣೆಮಾರ್ ಎಂಬಲ್ಲಿ ಅಪಘಾತ ನಡೆದಿದ್ದು, ರಿಕ್ಷಾ ಚಾಲಕ ಅಮ್ಮುಂಜೆ ನಿವಾಸಿ ಮಹಾಬಲ ಪೂಜಾರಿ ( 37) ಮೃತಪಟ್ಟ ಅವಿವಾಹಿತ ಯುವಕನಾಗಿದ್ದಾನೆ

ಈತನ ಸಂಬಂಧಿ ಮಕ್ಕಳಾದ ತುಷಾರ್,ಭವಿತ್ ಮತ್ತು ಪ್ರದೀಪ್ ಎಂಬವರು ಗಾಯಗೊಂಡಿದ್ದು, ಅವರು ಮೂಡಬಿದರೆಯ ಮಿಜಾರು ಎಂಬಲ್ಲಿಗೆ ಜಾತ್ರೆಗೆ ಹೋಗಿ ವಾಪಸು ಮನೆಗೆ ಬರುವ ವೇಳೆ ಮನೆಗೆ ಸುಮಾರು 500 ಮೀ ದೂರದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಚಾಲಕನ ನಿಯಂತ್ರಣ ‌ಕಳೆದ ರಿಕ್ಷಾ ತಲೆಕೆಳಗಾದ ಸ್ಥಿತಿಯಲ್ಲಿ ಚರಂಡಿಗೆ ಬಿದ್ದಿದೆ. ಚಾಲಕ ರಿಕ್ಷಾ ದ ಅಡಿಯಲ್ಲಿ ಸಿಲುಕಿ ಸ್ಥಳದಲ್ಲಿಯೇ ‌ಮೃತಪಟ್ಟರೆ ಉಳಿದಂತೆ ರಿಕ್ಷಾದಲ್ಲಿ ಪ್ರಯಾಣಿಕರಾದ ಮೂವರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಬಂಟ್ವಾಳ ಸಂಚಾರಿ ಪೋಲಿಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.