


ಡೈಲಿ ವಾರ್ತೆ: 15/ಫೆ. /2025


ಬ್ರಹ್ಮಾವರ ಮೂಲದ ಇಂಜಿನಿಯರ್ ಗಂಗಾವತಿಯಲ್ಲಿ ಆತ್ಮಹತ್ಯೆ
ಕೊಪ್ಪಳ: ದೇವಾಲಯಗಳ ವಿನ್ಯಾಸ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದ ಖ್ಯಾತ ಸಿವಿಲ್ ಇಂಜಿನಿಯರ್ ವಿನಯ್ ಕುಮಾರ್ (38) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳದ ಗಂಗಾವತಿಯಲ್ಲಿ ನಡೆದಿದೆ.
ಅವರು ಆತ್ಮಹತ್ಯೆಗೆ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿನಯ್ ಕುಮಾರ್ ಉಡುಪಿ ಜಿಲ್ಲೆಯ ಬ್ರಹ್ಮಾವರದ ನಿವಾಸಿ. ಅವರು ‘ಎಂ.ಕೆ. ಟೆಂಪಲ್ ಕನ್ಸ್ಟ್ರಕ್ಷನ್’ ಸಂಸ್ಥೆಯ ಮಾಲೀಕರಾಗಿದ್ದು, ದೇಶದಾದ್ಯಂತ ಗ್ರಾನೈಟ್, ಅಮೃತಶಿಲೆ ಹಾಗೂ ಸ್ಥಳೀಯ ಕಚ್ಚಾ ಸಾಮಗ್ರಿಗಳನ್ನು ಬಳಸಿ ವಿಶಿಷ್ಟ ಶೈಲಿಯ ದೇಗುಲಗಳನ್ನು ನಿರ್ಮಿಸುವುದರಲ್ಲಿ ಪ್ರಸಿದ್ಧರಾಗಿದ್ದರು. ಕೊಟ್ಟೂರು ಬಸವೇಶ್ವರ ದೇವಸ್ಥಾನ, ಗಂಗಾವತಿಯ ಕನಕಗಿರಿ ರಸ್ತೆಯ ಬೀರಲಿಂಗೇಶ್ವರ ದೇವಾಲಯ, ಕಿಂದಿಕ್ಯಾಂಪ್ನ ರಾಮ ದೇವಾಲಯ ಸೇರಿದಂತೆ ಹಲವು ಧಾರ್ಮಿಕ ಕಟ್ಟಡಗಳ ನಿರ್ಮಾಣ ಮಾಡಿದ್ದರು.
ಗಂಗಾವತಿಯ ಕನಕಗಿರಿ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ವಿನಯ್ ಕುಮಾರ್ ಆತ್ಮ ಹತ್ಯೆ ಮಾಡಿಕೊಂಡಿದ್ದು ಪತ್ತೆಯಾಗಿದೆ. ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಗಂಗಾವತಿ ಪೊಲೀಸ್ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಹತ್ತಾರು ದೇಗುಲಗಳ ನಿರ್ಮಾತೃ:ವಿಭಿನ್ನ ಶೈಲಿಯ ದೇಗುಲಗಳ ನಿರ್ಮಾಣದಲ್ಲಿ ವಿನಯ್ ಕೆಲಸ ಮಾಡಿದ್ದರು. ಗ್ರಾನೈಟ್, ಅಮೃತ ಶಿಲೆ ಸೇರಿದಂತೆ ಸ್ಥಳೀಯವಾಗಿ ಲಭ್ಯವಾಗುವ ಕಚ್ಚಾ ಸಾಮಗ್ರಿ, ಶಿಲೆಗಳನ್ನು ಬಳಸಿಕೊಂಡು ಅತ್ಯಾಕರ್ಷಕ ಶೈಲಿಯಲ್ಲಿ ದೇವಾಲಯಗಳನ್ನು ನಿರ್ಮಿಸುತ್ತಿದ್ದರು. ಗಂಗಾವತಿಯ ನ್ಯಾಯಾಲಯದ ಮುಂದಿರುವ ಕೊಟ್ಟೂರು ಬಸವೇಶ್ವರ ದೇವಸ್ಥಾನ, ಕನಕಗಿರಿ ರಸ್ತೆಯಲ್ಲಿರುವ ಹಾಲುಮತ ಸಮಾಜದ ಬೀರಲಿಂಗೇಶ್ವರ ದೇಗುಲ, ಕಿಂದಿಕ್ಯಾಂಪಿನಲ್ಲಿರುವ ರಾಮ ದೇಗುಲಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದರು.ಗಂಗಾವತಿ ತಾಲೂಕಿನ ಕೋಟಯ್ಯಕ್ಯಾಂಪಿನಲ್ಲಿ ಕೋಟ್ಯಂತರ ರೂಪಾಯಿ ಮೊತ್ತದಲ್ಲಿ ಶ್ರೀರಾಮ ದೇವರ ದೇವಸ್ಥಾನ ನಿರ್ಮಾಣವನ್ನು ಇದೇ ವಿನಯ್ ಕುಮಾರ್ ಮಾಡಿದ್ದರು. ಇದೇ ಫೆಬ್ರವರಿ 26ರಿಂದ ದೇಗುಲ ಆರಂಭೋತ್ಸವದ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.