


ಡೈಲಿ ವಾರ್ತೆ: 16/ಫೆ. /2025


ನದಿಯಲ್ಲಿ ಯೋಗ ಮಾಡುತ್ತಲೇ ಮೃತಪಟ್ಟ ಯೋಗಪಟು ನಾಗರಾಜ್

ಚಾಮರಾಜನಗರ: ಕೊಳ್ಳೇಗಾಲದ ದಾಸನಪುರ ಬಳಿಯ ಕಾವೇರಿ ನದಿಯಲ್ಲಿ ಯೋಗ ಮಾಡುತ್ತಲೇ ಯೋಗಪಟು ಮೃತಪಟ್ಟಿದ್ದಾರೆ.
ಕೊಳ್ಳೇಗಾಲದ ಯೋಗಪಟು ನಾಗರಾಜ್ (78) ಮೃತ ದುರ್ದೈವಿ. ತೀರ್ಥ ಸ್ನಾನ ಮಾಡಲೆಂದು ನಾಗರಾಜ್ ಕಾವೇರಿ ನದಿಗೆ ಇಳಿದಿದ್ದರು. ನಾಗರಾಜ್ ನದಿ ನೀರಿನಲ್ಲಿ ತೇಲುತ್ತಾ ಯೋಗ ಮಾಡುತ್ತಿದ್ದರು. ಎಷ್ಟು ಹೊತ್ತಾದರೂ ನಾಗರಾಜು ತೇಲುವ ಸ್ಥಿತಿಯಲ್ಲೇ ಇದ್ದರು. ಅನುಮಾನಗೊಂಡು ಹತ್ತಿರ ಹೋಗಿ ನೋಡಿದಾಗ ನಾಗರಾಜ್ ಮೃತಪಟ್ಟಿದ್ದರು. ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯೋಗಪಟು ನಾಗರಾಜ್ ಅವರು ಕೊಳ್ಳೇಗಾಲ ಪಟ್ಟಣದ ಲಕ್ಷ್ಮಿ ನಾರಾಯಣ ದೇವಾಲಯದ ಬೀದಿಯಲ್ಲಿ ವಾಸವಾಗಿದ್ದು, ಕಳೆದ 30 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದರು. ನಾಗರಾಜ್ ಅವರು ಕೊಳ್ಳೇಗಾಲ ಪಟ್ಟಣದಲ್ಲಿ ಯೋಗಗುರು ಎಂದೇ ಖ್ಯಾತನಾಮರಾಗಿದ್ದರು. ನಾಗರಾಜ್ ಅವರು ಯುವಕರಿಗೆ, ವಯೋವೃದ್ಧರಿಗೆ ಯೋಗ ಹೇಳಿಕೊಡುತ್ತಿದ್ದರು. ನಾಗರಾಜ್ ಅವರು ಯಾವಾಗಲೂ ಲವ ಲವಿಕೆಯಿಂದ ಇರುತ್ತಿದ್ದರು.
ಅವರು ಶನಿವಾರ ತಮ್ಮ ಒಡನಾಡಿಗಳ ಜತೆ ಕಾವೇರಿ ನದಿಯಲ್ಲಿ ಪುಣ್ಯ ಸ್ನಾನದ ಜತೆ ಯೋಗ ಮಾಡುತ್ತಿದ್ದರು. ಹಿಮ್ಮುಕವಾಗಿ ತೇಲುತ್ತಾ ಯೋಗ ನಿದ್ರೆ ಮಾಡುತ್ತಿದ್ದರು. 30 ನಿಮಿಷ ಆದರೂ ನಾಗರಾಜ್ ಅವರಿಂದ ಯಾವುದೇ ಪ್ರತಿಕ್ರಿಯ ಬಾರದ ಹಿನ್ನೆಲೆಯಲ್ಲಿ, ಸ್ನೇಹಿತರು ಹತ್ತಿರ ಹೋಗಿ ನೋಡಿದಾಗ ಮೃತ ಪಟ್ಟಿರುವುದ ಬೆಳಕಿಗೆ ಬಂದಿದೆ.