ಡೈಲಿ ವಾರ್ತೆ: 17/ಫೆ. /2025

ಬೆಳ್ಳಂಬೆಳಗ್ಗೆ ದೆಹಲಿಯಲ್ಲಿ ಭೂಕಂಪ – ಬೆಚ್ಚಿಬಿದ್ದು ಮನೆಗಳಿಂದ ಹೊರಗೆ ಓಡಿದ ಜನ

ನವದೆಹಲಿ: ದೆಹಲಿ-ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ ಇಂದು (ಫೆ.17) ಮುಂಜಾನೆ 5:36ರ ವೇಳೆಗೆ ಪ್ರಬಲ ಭೂಕಂಪ ಸಂಭವಿಸಿದೆ.

ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ. ಆದರೆ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. 5 ಕಿಲೋಮೀಟ‌ರ್ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

ಉತ್ತರ ಭಾರತದಾದ್ಯಂತ ಭೂಕಂಪನದ ಅನುಭವವಾಗಿದೆ. ಭೂಕಂಪನದ ಕೇಂದ್ರಬಿಂದು ದೌಲಾ ಕುವಾನ್‌ನಲ್ಲಿರುವ ದುರ್ಗಾಬಾಯಿ ದೇಶಮುಖ್ ಮಹಾವಿದ್ಯಾಲಯದ ಬಳಿ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭೂಕಂಪದಿಂದ ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿರುವ ಹಲವಾರು ಬಹುಮಹಡಿ ಕಟ್ಟಡಗಳ ನಿವಾಸಿಗಳು ಆತಂಕದಿಂದ ಹೊರಗೆ ಓಡಿ ಬಂದಿದ್ದಾರೆ.