



ಡೈಲಿ ವಾರ್ತೆ: 17/ಫೆ. /2025


ಮೈಸೂರು| ಅಪಾರ್ಟ್ಮೆಂಟ್ನಲ್ಲಿ ಒಂದೇ ಕುಟುಂಬದ ನಾಲ್ವರ ಸಾವು
ಮೈಸೂರು: ಮೈಸೂರಿನ ವಿಶ್ವೇಶ್ವರಯ್ಯನಗರದ ಅಪಾರ್ಟ್ಮೆಂಟ್ನಲ್ಲಿ ಬಾಲಕ ಸೇರಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಕುಶಾಲ್ (15), ಚೇತನ್ (45), ರೂಪಾಲಿ (43), ಪ್ರಿಯಂವಧಾ (62) ಮೃತ ದುರ್ದೈವಿಗಳು.
ಚೇತನ್ ಮೊದಲಿಗೆ ತಾಯಿ ಪ್ರಿಯಂವಧಾ, ಪತ್ನಿ ರೂಪಾಲಿ ಮತ್ತು ಮಗ ಕುಶಾಲ್ಗೆ ವಿಷವುಣಿಸಿ ಸಾಯಿಸಿರುವ ಶಂಕೆ ವ್ಯಕ್ತವಾಗಿದೆ. ಮೂವರಿಗೆ ವಿಷವುಣಿಸಿ ಸಾಯಿಸಿ ಬಳಿಕ ಚೇತನ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ.
ಸ್ಥಳಕ್ಕೆ ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಡಿಸಿಪಿ ಜಾಹ್ನವಿ, ವಿದ್ಯಾರಣ್ಯಪುರಂ ಇನ್ಸ್ಪೆಕ್ಟರ್ ಮೋಹಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.