ಡೈಲಿ ವಾರ್ತೆ: 20/ಫೆ. /2025

ತಹಶೀಲ್ದಾರ್ ಸಹಿ‌ ನಕಲು ಮಾಡಿ ಮುಜರಾಯಿ ಇಲಾಖೆಯ 63 ಲಕ್ಷ ರೂ. ಲಪಟಾಯಿಸಿದ ಆರ್​ಐ!

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ರೆವಿನ್ಯೂ ಇನ್ಸ್​ಪೆಕ್ಟರ್ ಹೇಮಂತ್ ಕುಮಾರ್ ಮುಜರಾಯಿ ಇಲಾಖೆಯ ಲಕ್ಷಾಂತರ ರೂಪಾಯಿ ಲಪಟಾಯಿಸಿ ಸಿಕ್ಕಿ ಬಿದ್ದಿದ್ದಾರೆ. ರೆವಿನ್ಯೂ ಇನ್ಸ್​ಪೆಕ್ಟರ್ (ಆರ್​ಐ) ಆಗಿ ಬರುವ ಮೊದಲು ಮುಜರಾಯಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಹೇಮಂತ್ ಇಲಾಖೆಯ ಬಗ್ಗೆ ಹೆಚ್ಚು ಮಾಹಿತಿ ತಿಳಿದಿದ್ದರಿಂದ, 2023 ರಿಂದ ಇಲ್ಲಿಯವರೆಗೆ ಇಬ್ಬರು ತಹಶಿಲ್ದಾರ್, ಓರ್ವ ಕೇಸ್ ವರ್ಕರ್ ಸಹಿ ಮತ್ತು ಸೀಲ್ ಬಳಸಿ ಮುಜುರಾಯಿ‌ ಇಲಾಖೆಯಲ್ಲಿನ ಸುಮಾರು 63 ಲಕ್ಷ ರೂ. ಹಣವನ್ನು ಲಪಟಾಯಿಸಿದ್ದರು.

ಹಣ ಲಪಟಾಯಿಸಿದ್ದು ಗೊತ್ತಾಗಿದ್ಹೇಗೆ?
ಮುಜರಾಯಿ ಇಲಾಖೆಯ ದೇವಾಲಯದಿಂದ ಸರ್ಕಾರಕ್ಕೆ ಹಣ ಸಂದಾಯವಾಗಿಲ್ಲ ಎಂಬ ಬಗ್ಗೆ ದೊಡ್ಡಬಳ್ಳಾಪುರ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್​ಗೆ ದೂರು ಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಜೊತೆಗೆ‌ ಖಾತೆಯಲ್ಲಿನ ಹಣ‌ ಮಾಯವಾದ ಬಗ್ಗೆ ದೊಡ್ಡಬಳ್ಳಾಪುರ ತಹಶೀಲ್ದಾರ್ ನಗರ ಪೊಲೀಸ್ ಠಾಣೆಯಲ್ಲಿ ದೂರ ನೀಡಿದ್ದರು. ಅದರಂತೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು‌ ತನಿಖೆ ನಡೆಸಿದ್ದು, ಆರೋಪಿ ಆರ್​ಐ ಹೇಮಂತ್​ನನ್ನು ಬಂಧಿಸಿ ಪ್ರಕರಣ ಬಯಲಿಗೆಳೆದಿದ್ದಾರೆ. ಇದೀಗ ಸರ್ಕಾರದ ಹಣ ಗುಳುಂ ಮಾಡಿದ್ದ ರೆವಿನ್ಯೂ ಇನ್ಸ್​​ಪೆಕ್ಟರ್​​ನನ್ನು ಅಮಾನತ್ತು ಮಾಡಿ‌ ತಹಶಿಲ್ದಾರ್ ಆದೇಶಿಸಿದ್ದಾರೆ.

ಅಂದಹಾಗೆ ಅಮಾನತು ಮಾಡಿರುವ ಆರ್​​ಐ ಮುಜರಾಯಿ ಹಣವನ್ನು ಬೇರೆ ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡು ನಂತರ ಆ ಹಣವನ್ನ ಡ್ರಾ ಮಾಡಿಕೊಂಡಿರುವುದು ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ‌ ಬಂದಿದೆ. ಅಲ್ಲದೆ ಆರ್​ಐ ಹೇಮಂತ್ ಬೆಂಗಳೂರಿನ ಮಹಿಳೆಯೊಬ್ಬರ ಕೆನರಾ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಮುಜರಾಯಿ ಇಲಾಖೆಯಲ್ಲಿನ ಹಣ ವರ್ಗಾವಣೆ ಮಾಡಿದ್ದು, ಬಳಿಕ ಮಹಿಳೆಯ ಖಾತೆಯಿಂದ ಬೇರೊಂದು ಖಾತೆಗೆ ಹಣ ಬದಲಾವಣೆ ಮಾಡಿಕೊಂಡು ಸರ್ಕಾರಕ್ಕೆ ಮಂಕು ಬೂದಿ ಎರಚಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಆರೋಪಿ ಹಣ ಡ್ರಾ ಮಾಡಿಕೊಂಡು, ಐಷರಾಮಿ ಜೀವನ ನಡೆಸಲು ಸೈಟ್ ಖರೀದಿ ಮಾಡಿ ಮನೆ ನಿರ್ಮಾಣ ಮಾಡಲು ಹೊರಟಿದ್ದ ಎಂಬ ಆರೋಪ ಸಹ ಕೇಳಿ ಬಂದಿದೆ. ಈ ಬಗ್ಗೆ ಪೊಲೀಸರ ಮುಂದೆ ತನಿಖೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ.
ಮುಜರಾಯಿ ಇಲಾಖೆಯ ಖಾತೆಯಿಂದ ವರ್ಗಾವಣೆ ಮಾಡಿಕೊಂಡಿದ್ದ ಹಣವನ್ನು ಪೊಲೀಸರು ವಿವಿಧ ಖಾತೆಗಳಿಂದ ವಶಕ್ಕೆ ಪಡೆದಿದ್ದು ಆರ್​​ಐ ಹೇಮಂತ್ ಕುಮಾರ್​​ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುತ್ತಿದ್​ದಾರೆ. ಸಂಪೂರ್ಣ ತನಿಖೆ ನಂತರ, ಬೇರೆ ಯಾವುದಾದರೂ ಅಕ್ರಮಗಳನ್ನೂ ಎಸಗಿದ್ದಾರೆಯೇ ಎಂಬುದು ಬೆಳಕಿಗೆ‌ ಬರಲಿದೆ.