ಡೈಲಿ ವಾರ್ತೆ: 20/ಫೆ. /2025

ದೆಹಲಿಗೆ ರೇಖಾ ಗುಪ್ತಾ ನೂತನ ಸಿಎಂ: ಇಂದು ಪ್ರಮಾಣವಚನ ಸ್ವೀಕಾರ

ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯ ಹೆಸರನ್ನು ಅಂತಿಮವಾಗಿ ಘೋಷಿಸಲಾಗಿದೆ. ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ರೇಖಾ ಗುಪ್ತಾ ಅವರನ್ನು ಮುಂದಿನ ಸಿಎಂ ಆಗಿ ಆಯ್ಕೆ ಮಾಡಲಾಯಿತು.

ಕೇಂದ್ರ ವೀಕ್ಷಕರಾದ ರವಿಶಂಕರ್ ಪ್ರಸಾದ್ ಮತ್ತು ಓಂ ಪ್ರಕಾಶ್ ಧಂಕರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹಿಳಾ ಶಾಸಕಿಗೆ ಸಿಎಂ ಪಟ್ಟ ಕಟ್ಟಲಾಯಿತು. ಹಿರಿಯ ಶಾಸಕ ಮೋಹನ್ ಸಿಂಗ್ ಬಿಶ್ತ್ ಅವರು ಈ ಹೆಸರನ್ನು ಪ್ರಸ್ತಾಪಿಸಿದರು. ಇದನ್ನು ಎಲ್ಲಾ ಶಾಸಕರು ಅನುಮೋದಿಸಿದರು. ನಂತರ, ವೀಕ್ಷಕರು ರೇಖಾ ಗುಪ್ತಾ ಅವರ ಹೆಸರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕಿ, ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದರು.

ದೆಹಲಿಯ 4ನೇ ಮಹಿಳಾ ಸಿಎಂ: ಆಮ್​ ಆದ್ಮಿ ಪಕ್ಷ (ಆಪ್) ಕೆಡವಿ 27 ವರ್ಷಗಳ ಬಳಿಕ ದೆಹಲಿ ಗದ್ದುಗೆ ಏರಿದ್ದ ಬಿಜೆಪಿ ಮತ್ತೊಮ್ಮೆ ಮಹಿಳಾ ಸಿಎಂ ಮೊರೆ ಹೋಗಿದೆ. ರೇಖಾ ಅವರು ಬಿಜೆಪಿಯ ಎರಡನೇ ಮತ್ತು ದೆಹಲಿಯ ನಾಲ್ಕನೇ ಮಹಿಳಾ ಸಿಎಂ ಆಗಲಿದ್ದಾರೆ.